ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ: ಸೂಕ್ಷ್ಮ, ಅತಿ ಸೂಕ್ಷ್ಮ, ನಕ್ಸಲ್ ಪೀಡಿತ ಪ್ರದೇಶದಲ್ಲಿ ಉತ್ತಮ ಮತದಾನ!

Pinterest LinkedIn Tumblr

ಉಡುಪಿ/ಕುಂದಾಪುರ: ರಾಜ್ಯ ವಿಧಾನಸಭಾ ಚುನಾವಣೆ ಶನಿವಾರ ಜಿಲ್ಲಾದ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದು ಮಧ್ಯಾಹ್ನದ ಸುಮಾರಿಗೆ 44% ಮತದಾನ ನಡೆದಿದೆ. ಜಿಲ್ಲೆಯಲ್ಲಿ ಈವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ನಕ್ಸಲ್ ಪೀಡಿತ ಪ್ರದೇಶ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದ ಮತಗಟ್ಟೆಯಲ್ಲಿಯೂ ಬಿರುಸಿನ ಮತದನಾ ಪ್ರಕ್ರಿಯೆ ಕಂಡುಬಂದಿದ್ದು ನಗರದಲ್ಲಿಯೇ ಕೊಂಚ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

ಉಡುಪಿ ಜಿಲ್ಲೆಯಲ್ಲಿ ಒಟ್ಟು 9,93,415 ಮತದಾರರಿದ್ದು, 4,78,350 ಪುರುಷರು, 5,15,041 ಮಹಿಳೆಯರು ಮತ್ತು 24 ಇತರ ಮತದಾರರಿರುತ್ತಾರೆ. ಇದಲ್ಲದೆ 154 ಸೇವಾ ಮತದಾರರಿದ್ದಾರೆ. ಒಟ್ಟು 1103 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಚುನಾವಣೆ ನಡೆಸಲು 6342 ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾರೆ. ಜಿಲ್ಲೆಯಲ್ಲಿರುವ 1103 ಮತಗಟ್ಟೆಗಳಲ್ಲಿ ಮತದಾನದ ದಿನದಂದು ಪೂರ್ವಾಹ್ನ ಅಣುಕು ಮತದಾನ ನಡೆಸಲಾಯಿತು. ಜಿಲ್ಲೆಯಲ್ಲಿನ ಒಟ್ಟು 132 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಲಾಗಿದೆ. ಜಿಲ್ಲೆಯ ವಿವಿಧ ಮತಗಟ್ಟೆಳಿಗೆ 274 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ಜಿಲ್ಲೆಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ 10 ಮತಗಟ್ಟಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಿ ಅಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮಹಿಳೆಯರೇ ಮತಗಟ್ಟೆಯನ್ನು ನಿರ್ವಹಿಸುತ್ತಿದ್ದಾರೆ. ವಿಕಲಚೇತನ ಮತದಾರರ ಅನುಕೂಲಕ್ಕಾಗಿ ೫೫೫ ಮತಗಟ್ಟೆ ಪ್ರದೇಶಗಳಿಗೆ ವೀಲ್‌ಚೇರ್ ಸೌಲಭ್ಯ ಮತ್ತು ದೃಷ್ಟಿ ಮಂದವುಳ್ಳ ಮತದಾರರಿಗೆ ಭೂತಕನ್ನಡಿಗಳ ವ್ಯವಸ್ಥೆ ಮಾಡಲಾಗಿದೆ.

ಅಲ್ಲಲ್ಲಿ ತಾಂತ್ರಿಕ ದೋಷ…!
ಮತ ಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಗಿ ತಡವಾಗಿ ಕೆಲವೆಡೆ ಮತದಾನ ಪ್ರಕ್ರಿಯೆ. ಉಡುಪಿ‌ ಜಿಲ್ಲೆಯ ಕುಕ್ಕಿಕಟ್ಟೆ ಬೂತ್ ನಂಬರ್ 186 ರಲ್ಲಿ ಕಾಣಿಸಿಕೊಂಡ ದೋಷ ಇದಾಗಿದೆ. ಕುಂದಾಪುರದ ಹಕ್ಲಾಡಿ ಹಾಗೂ ಇನ್ನೊಂದೆರಡು ಕಡೆಯ ಮತಗಟ್ಟೆಯಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಕೆಲವೆಡೆ ಕಾದು ಸುಸ್ತಾದ ಮತದಾರರು ವಾಪಾಸ್ಸಾದ ಘಟನೆ ನಡೆದಿದೆ.

Comments are closed.