ಕರ್ನಾಟಕ

ಕಾಂಗ್ರೆಸ್ ಹೈಕಮಾಂಡ್ ದಲಿತ ಸಿಎಂ ಆಯ್ಕೆಗೆ ಮುಂದಾದರೆ ನನ್ನದೇನೂ ಅಭ್ಯಂತರವಿಲ್ಲ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

ಮೈಸೂರು: ಕಾಂಗ್ರೆಸ್ ಹೈಕಮಾಂಡ್ ದಲಿತ ಸಿಎಂ ಆಯ್ಕೆಗೆ ಮುಂದಾದರೆ ನನ್ನದೇನೂ ಅಭ್ಯಂತರವಿಲ್ಲ.. ಆದರೆ ಹೈಕಮಾಂಡ್ ಶಾಸಕರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ಹೇಳುವ ಮೂಲಕ ಸಿಎಂ ಸಿದ್ದಾರಾಮಯ್ಯ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಚುನವಾಣೆ ಮುಕ್ತಾಯವಾಗಿದೆ. ರಾಜ್ಯದಲ್ಲಿ ಖಂಡಿತಾ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ದಲಿತ ಸಿಎಂ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ದಲಿತ ಸಿಎಂ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಂಡರೆ ಖಂಡಿತಾ ನಾನು ಅದಕ್ಕೆ ವಿರೋಧ ಮಾಡುವುದಿಲ್ಲ. ಸಂತೋಷವಾಗಿಯೇ ಅದಕ್ಕೆ ಸಹಕರಿಸುತ್ತೇನೆ. ಆದರೆ ಹೈಕಮಾಂಡ್ ಶಾಸಕರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಬಾದಾಮಿ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರಗಳಲ್ಲಿ ನನ್ನ ಗೆಲುವು ಖಚಿತ ಎಂದ ಸಿಎಂ ಸಿದ್ದರಾಮಯ್ಯ ಅವರು, ಬಾದಾಮಿಯಲ್ಲಿ ಹೆಚ್ಚು ಮತಗಳು ಲಭಿಸಲಿದೆ. ಆದರೆ ಚಾಮುಂಡೇಶ್ವರಿಯಲ್ಲಿ ನಾನು ನಿರೀಕ್ಷೆ ಮಾಡಿದಷ್ಚು ಹೆಚ್ಚು ಮತಗಳು ಬರದೇ ಇದ್ದರೂ ಗೆಲುವು ಖಚಿತ. ಹಾಲಿ ಚುನಾವಣೆಯಲ್ಲಿ ಖಂಡಿತಾ ಕಾಂಗ್ರೆಸ್ 120ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಲಿದೆ ಎಂದು ಹೇಳಿದರು.

ಅಂತೆಯೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ಚುನಾವಣಾ ರಾಜಕಾರಣದಿಂದ ದೂರ ಉಳಿಯುತ್ತೇನೆ. ಆದರೆ ನನ್ನ ಬೆಂಬಲಿಗರನ್ನು ಪ್ರೋತ್ಸಾಹಿಸುತ್ತೇನೆ. ಅಗತ್ಯ ಬಿದ್ದರೆ ಅವರ ಪ್ರಚಾರ ಕೂಡ ನಡೆಸುತ್ತೇನೆ. ನಾನು ಮಾತ್ರ ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಬುದಕಿರುವವರೆಗೂ ಕೋಮುವಾದಿಗಳ ವಿರುದ್ಧ ಹೋರಾಡುತ್ತೇನೆ. ಸಾಮಾಜಿಕ ನ್ಯಾಯದ ಕುರಿತ ನನ್ನ ಹೋರಾಟ ನಿರಂತರವಾಗಿರುತ್ತದೆ. ರಾಷ್ಟ್ರ ರಾಜಕಾರಣದತ್ತ ನನಗೆ ಒಲವಿಲ್ಲ. ಹೀಗಾಗಿ ಲೋಕಸಭೆಗೆ ಸ್ಪರ್ಧಿಸುವ ಮಾತೇ ಇಲ್ಲ. ಅಂತೆಯೇ ಇಂದು ಮತ್ತು ನಾಳೆ ಸಂಪೂರ್ಣ ವಿಶ್ರಾಂತಿಯಲ್ಲಿರುತ್ತೇನೆ. ಚಿತ್ರ ಮಂದಿರಕ್ಕೂ ಹೋಗಲ್ಲ ಎಲ್ಲೂ ಹೋಗೊಲ್ಲ. ಮಂಗಳವಾರ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

Comments are closed.