ಕರ್ನಾಟಕ

ರಾಜರಾಜೇಶ್ವರಿ ನಗರದಲ್ಲಿ ಮತದಾನ ಮುಂದೂಡಿಕೆ

Pinterest LinkedIn Tumblr


ಬೆಂಗಳೂರು: ಇಡೀ ಬೆಂಗಳೂರು ಶನಿವಾರ ಮತದಾನದ ಗುಂಗಲ್ಲಿತ್ತು. ವಿವಿಧ ಕ್ಷೇತ್ರಗಳ ಮತದಾರರು ಹಕ್ಕು ಚಲಾಯಿಸಿ, ತಾವು ಹಾಕಿದ ಮತ ತಮ್ಮ ಅಭ್ಯರ್ಥಿಗೇ ಹೋಗಿದೆ ಎಂಬುದನ್ನು ವಿವಿ ಪ್ಯಾಟ್‌ನಲ್ಲಿ ಖಾತರಿಪಡಿಸಿಕೊಂಡು ಥ್ರಿಲ್‌ ಆದರೆ, ಮತದಾನ ಮುಂದೂಡಿಕೆಯಾದ ನಗರದ ರಾಜರಾಜೇಶ್ವರಿ ನಗರ ಯಾವುದೇ ಚಟುವಟಿಕೆ ಇಲ್ಲದೆ “ಮೌನ’ವಾಗಿತ್ತು.

ಕ್ಷೇತ್ರದ ಮೂರೂ ಪಕ್ಷಗಳ ಕಾರ್ಯಕರ್ತರು ನೆರೆಹೊರೆಯ ಕ್ಷೇತ್ರಗಳತ್ತ ಮುಖ ಮಾಡಿದ್ದರು. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾ ಹೊರಗೆ ಬರಲೇ ಇಲ್ಲ. ಮತದಾರರ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪ ಪ್ರಕರಣ ಸಂಬಂಧ ಚುನಾವಣಾ ಆಯೋಗ ಆರ್‌.ಆರ್‌ ನಗರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಗೆ ಶಾಸಕರನ್ನು ಆಯ್ಕೆ ಮಾಡುವ ಏಕಕಾಲದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕ್ಷೇತ್ರದ ಮತದಾರರಿಗೆ ಇರಲಿಲ್ಲ. ಈ ಬಗ್ಗೆ ಮತದಾರರು ಅಸಮಾಧನವನ್ನೂ ಹೊರಹಾಕಿದರು.

ರಾಜಕಾರಣಿಗಳಿಂದಲೇ ನಮಗೆ ಆ ಅದೃಷ್ಟ ಇಲ್ಲವಾಯಿತು ಎಂದು ಮೊದಲ ಮತ ಹಕ್ಕು ಚಲಾಯಿಸುವ ಉತ್ಸಾಹದಲ್ಲಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರ ಕಿಶೋರ್‌. ಚುನಾವಣೆ ಮುಂದೂಡಿಕೆ ವಿಚಾರ ಕ್ಷೇತ್ರದ ಮತದಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಮಂದಿ ಆಯೋಗದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಕೆಲ ಮತದಾರರು ರಾಜಕಾರಣಿಗಳು ಮಾಡುವ ತಪ್ಪುಗಳಿಂದ ರಾಜ್ಯ ವಿಧಾನಸಭೆಯಲ್ಲಿ ನಮ್ಮನ್ನು ಆಳುವ ಸರ್ಕಾರ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತಾಯಿತು ಎಂದು ಬೇಸರವ್ಯಕ್ತಪಡಿಸಿದರು.

ಈ ಕುರಿತು ಉದಯವಾಣಿ ಜತೆ ಮಾತನಾಡಿದ ಎಚ್‌ಎಂಟಿ ವಾರ್ಡ್‌ನ ಕಿಶೋರ್‌, ಮೊದಲ ಬಾರಿ ಮತದಾನ ಮಾಡುವ ಉತ್ಸಾಹದಲ್ಲಿದ್ದೆ. ಆದರೆ, ಚುನಾವಣೆಯೇ ಮುಂದೂಡಿಕೆಯಾಯ್ತು. ಎಲ್ಲರೂ ಓಟ್‌ ಮಾಡುವಾಗ ನಾವು ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ರಾಜಕಾರಣಿಗಳ ತಪ್ಪಿನಿಂದ ಚುನಾವಣೆ ಮುಂದಕ್ಕೋಗಿದೆ. ಆದರೆ ಪಾರದರ್ಶಕ ಹಾಗೂ ಮುಕ್ತ ಚುನಾವಣೆ ದೃಷ್ಟಿಯಿಂದ ಆಯೋಗ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಹಕ್ಕು ಚಲಾಯಿಸಲು ಕೆಲಸಕ್ಕೆ ರಜೆ ಹಾಕಿ ಬಂದಿದ್ದೆ. ಆದರೆ, ಕ್ಷೇತ್ರದ ಚುನಾವಣೆ ಮುಂದಕ್ಕೆ ಹೋಗಿರುವುದು ಗೊತ್ತಾಗಿ ಬೇಸರವಾಯಿತು. ಮುಂದಿನ ಬಾರಿ ಚುನಾವಣೆ ನಡೆದಾಗ ಮತ ಚಲಾಯಿಸುತ್ತೇನೆ. ನಮ್ಮ ಇಷ್ಟದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅದರಲ್ಲೇನು ವಿಶೇಷವಿಲ್ಲ ಎಂದು ಜಾಲಹಳ್ಳಿ ವಾರ್ಡ್‌ನ ಮತದಾರ ಶರವಣ ಹೇಳಿದರು.

ಇನ್ನು ಚುನಾವಣೆ ಮುಂದೂಡಿದ್ದರೂ ಮುಂಜಾಗ್ರತಾ ಕ್ರಮವಾಗಿ ಕ್ಷೇತ್ರದ ಹಲವು ಭಾಗಗಳಲ್ಲಿ ಪೊಲೀಸ್‌ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಕ್ಷೇತ್ರದಲ್ಲಿ ಎಂದಿನಂತೆ ವಾತಾವರಣವಿತ್ತು. ಟೀ ಸ್ಟಾಲ್‌, ಬಸ್‌ಸ್ಟಾಂಡ್‌ಗಳಲ್ಲಿ ಸೇರಿದ್ದ ಯುವಕರು ಜನರು ರಾಜ್ಯದಲ್ಲಿ ನಡೆಯುತ್ತಿದ್ದ ಮತದಾನ ಪ್ರಕ್ರಿಯೆ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂತು.

ಮತ್ತೂಂದೆಡೆ ಆರ್‌.ಆರ್‌ ನಗರದಲ್ಲಿ ಮತದಾನಕ್ಕೆ ನಿಗದಿಪಡಿಸಲಾಗಿದ್ದ ಸರೋಜ ಮೆಮೊರಿಯಲ್‌ ಇಂಗ್ಲೀಷ್‌ ಸ್ಕೂಲ್‌ನ ಮತಗಟ್ಟೆಗೆ ನಿಯೋಜನೆಗೊಂಡಿದ್ದ ಸರ್ಕಾರಿ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಆಗಮಿಸಿದ್ದರು. ಬಳಿಕ ಮತದಾನ ಮುಂದೂಡಿಕೆ ತಿಳಿದ ಬಳಿಕ ಸ್ಥಳದಿಂದ ತೆರಳಿದರು. ಮತಗಟ್ಟೆ ಬಳಿ ಆಗಮಿಸಿದ್ದ ಕೆಲ ಸ್ಥಳೀಯ ಮತದಾರರು ಕೂಡ ಬೇಸರದಿಂದಲೇ ವಾಪಾಸ್ಸಾದರು.

Comments are closed.