ಕರ್ನಾಟಕ

ನಾಳಿನ ಮತಎಣಿಕೆಯತ್ತ ಎಲ್ಲರ ಕಣ್ಣು; ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರು ! ರಾಜ್ಯದಲ್ಲಿ ಯಾವ ಸರಕಾರ ಬರಲಿದೆ …?

Pinterest LinkedIn Tumblr

ಬೆಂಗಳೂರು : 2019ರ ಲೋಕಸಭೆ ಚುನಾವಣೆಯ ಸೆಮಿ ಫೈನಲ್ ಎಂದೇ ಪರಿಗಣಿಸಲಾಗಿರುವ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕಾಗಿ ಕೌಂಟ್ ಡೌನ್ ಆರಂಭವಾಗಿದ್ದು, ನಾಳಿನ ಮತಎಣಿಕೆಯತ್ತ ಎಲ್ಲರ ಕಣ್ಣು ನೆಟ್ಟಿದೆ.

ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದ್ದು, ಯಾರು ಗೆಲ್ಲುತ್ತಾರೆ , ಯಾರು ಸೋಲ್ತಾರೆ ಎಂಬ ಕುತೂಹಲ ಇಡೀ ದೇಶಾದ್ಯಂತ ಮನೆ ಮಾಡಿದೆ.

224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ರಾಜ್ಯಾದ್ಯಂತ ಸ್ಥಾಪಿಸಲಾಗಿದ್ದ 58, 546 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಬೆಂಗಳೂರಿನ ಜಯನಗರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಯನ್ನು ಮುಂದೂಡಲಾಗಿದೆ.

ಭಾರೀ ಪ್ರಮಾಣದ ಹಣ, ಮದ್ಯ ಹಂಚಿಕೆ ನಡುವೆಯೂ ದಾಖಲೆ ಪ್ರಮಾಣದ ಮತದಾನ ನಡೆದಿದ್ದು, 216 ಮಹಿಳೆಯರು ಸೇರಿದಂತೆ 2654 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಈ ಚುನಾವಣೆಯನ್ನು 2019 ರ ಲೋಕಸಭಾ ಚುನಾವಣೆಯ ಗೇಮ್ ಚೆಂಜರ್ ಎಂದು ಕಾಂಗ್ರೆಸ್ ನೋಡುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಹವಣಿಸುತ್ತಿದೆ.

224 ವಿಧಾನಸಭಾ ಕ್ಷೇತ್ರದ ಕರ್ನಾಟಕದಲ್ಲಿ ಅಧಿಕಾರ ರಚಿಸಲು 113 ಸ್ಥಾನಗಳ ಮ್ಯಾಜಿಕ್ ನಂಬರ್ ಪಡೆಯಲೇಬೇಕಾಗಿದೆ. ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದ ಕಾಂಗ್ರೆಸ್ ಈ ಬಾರಿಯೂ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ನಾವೇ ಅಧಿಕಾರಕ್ಕೆ ಬರುವುದಾಗಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಆತ್ಮ ವಿಶ್ವಾಸದಲ್ಲಿ ಬೀಗುತ್ತಿದ್ದರೆ. ವಿಶೇಷ ಅಂದರೆ, 1985 ರಿಂದಲೂ ಒಂದು ಬಾರಿ ಅಧಿಕಾರ ಅನುಭವಿಸಿದ್ದ ಸರ್ಕಾರ ಮತ್ತೊಂದು ಅವಧಿಗೂ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ.

ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಸರ್ಕಾರ ರಚಿಸಲು ಜೆಡಿಎಸ್ ಕೂಡಾ ಉತ್ಸುಕವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಭಿನ್ನ ವಿಭಿನ್ನ ವರದಿಗಳನ್ನು ನೀಡಿವೆ.

ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗೆ ಅತಿದೊಡ್ಡ ಪಕ್ಷವಾಗಲಿದೆ ಎಂದು ಹೇಳಿದ್ದರೆ, ಮತ್ತೆ ಕೆಲ ಸಮೀಕ್ಷೆಗಳು ಬಿಜೆಪಿ ಪರವಾಗಿವೆ. ಬಹುತೇಕ ಸಮೀಕ್ಷೆಗಳಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಊಹಿಸಿವೆ.ಒಟ್ಟಾರೇ, ಈ ಎಲ್ಲಾ ಊಹೆಗಳಿಗೆ ನಾಳೆ ತೆರೆ ಬೀಳಲಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.

Comments are closed.