ಕರ್ನಾಟಕ

ಯಾರಿಗೆ ಬೆಂಬಲ ನೀಡಬೇಕು ಎಂಬುದಾಗಿ ನಾನು ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ: ಕೆಪಿಜೆಪಿಯ ಶಂಕರ್‌

Pinterest LinkedIn Tumblr

ರಾಣೆಬೆನ್ನೂರು(ಹಾವೇರಿ ಜಿಲ್ಲೆ): ಸರ್ಕಾರ ರಚನೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬುದಾಗಿ ನಾನು ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ ಎಂದು ರಾಣೆಬೆನ್ನೂರು ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕೆಪಿಜೆಪಿಯ ಅಭ್ಯರ್ಥಿ ಆರ್‌. ಶಂಕರ್‌ ಸ್ಪಷ್ಟಪಡಿಸಿದರು.

ಕೆಪಿಜೆಪಿಯ ಶಂಕರ್‌ ಅವರು ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿರುವ ಕುರಿತು ಶಂಕರ್‌ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿರುವ ಅವರು, ಈವರೆಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಹೇಳಿದರು.

ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸೂಕ್ತ ಸ್ಥಾನ–ಮಾನ ದೊರೆಯುವ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸುತ್ತೇನೆ. ನಮ್ಮನ್ನು ಸಂಪರ್ಕಿಸಿದವರಿಗೆ ಇಲ್ಲ ಎಂದಾಗಲಿ, ಬರುತ್ತೇನೆ ಎಂದಾಗಲಿ ಹೇಳಿಲ್ಲ ಎಂದು ಅವರು ದೂರವಾಣಿಯಲ್ಲಿ ಸ್ಪಷ್ಟಪಡಿಸಿದರು.

ಶಂಕರ್‌ ಅವರನ್ನು ಬೆಂಗಳೂರಿಗೆ ಕರೆದೊಯ್ದ ಈಶ್ವರಪ್ಪ ಪುತ್ರ?
ಹೊಸ ಬೆಳವಣಿಗೆಯೊಂದರಲ್ಲಿ ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಅವರ ಪುತ್ರ, ಕೆಪಿಜೆಪಿಯ ಆರ್‌.ಶಂಕರ್‌ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಪಕ್ಷದ ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ಆದರೆ, ಶಂಕರ್‌ ಅವರು ತಾವು ಎಲ್ಲಿದ್ದೇವೆ, ಯಾರೊಟ್ಟಿಗಿದ್ದೇವೆ ಎಂದು ಹೇಳಿಲ್ಲ.

ಆರ್‌.ಶಂಕರ್‌ ಅವರು ಕುರುಬ ಸಮಾಜದವರಾಗಿದ್ದು, ಈಶ್ವರಪ್ಪ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಜತೆಗೆ ಕಾಗಿನೆಲೆ ಸಂಸ್ಥಾನವೂ ಸಮೀಪವಿದೆ. ಜತೆಗೆ, ಈಶ್ವರಪ್ಪ ಅವರ ಸಹಕಾರದೊಂದಿಗೆ ಶಂಕರ್‌ ಕುರುಬ ಸಮಾಜದ ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ. ಆದ್ದರಿಂದ, ಅವರು ಸಹಜವಾಗಿ ಈಶ್ವರಪ್ಪ ಅವರ ಕರೆಯಂತೆ ಅವರ ಪುತ್ರನ ಜತೆ ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.