ಕ್ರೀಡೆ

ಏಶ್ಯನ್‌ ಮಹಿಳಾ ಹಾಕಿ ಕೂಟದಲ್ಲಿ ಫೈನಲ್‌ ಪ್ರವೇಶಿಸಿದ ಇಂಡಿಯಾ

Pinterest LinkedIn Tumblr


ಡಾಂಗೆ ಸಿಟಿ (ದಕ್ಷಿಣ ಕೊರಿಯಾ): ಹಾಲಿ ಚಾಂಪಿಯನ್‌ ಭಾರತ ತಂಡ ಇನ್ನೊಂದು ಲೀಗ್‌ ಪಂದ್ಯ ಬಾಕಿ ಇರುವಂತೆಯೇ ಮಹಿಳಾ ಏಶ್ಯನ್‌ ಹಾಕಿ ಕೂಟದ ಫೈನಲ್‌ ಪ್ರವೇಶಿಸಿದೆ. ಗುರುವಾರದ ರೋಚಕ ಸೆಮಿಫೈನಲ್‌ ಕಾಳಗದಲ್ಲಿ ಭಾರತ 3-2 ಗೋಲುಗಳ ಅಂತರದಿಂದ ಮಲೇಶ್ಯವನ್ನು ಮಣಿಸಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿತು.

ಭಾರತದ ಪರ ಗುರ್ಜಿತ್‌ ಕೌರ್‌ 17ನೇ ನಿಮಿಷದಲ್ಲಿ ಹಾಗೂ ವಂದನಾ ಕಠಾರಿಯಾ 33ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಭಾರತ 2-0 ಅಂತರದಿಂದ ದಾಪುಗಾಲಿಕ್ಕಿತು. ದ್ವಿತೀಯ ಗೋಲು ಸಿಡಿದ ಕೇವಲ 3 ನಿಮಿಷದ ಬಳಿಕ ಮಲೇಶ್ಯ ತಿರುಗಿ ಬಿತ್ತು. ನೌರೈನಿ ರಶೀದ್‌ ಮಲೇಶ್ಯ ಪರ ಗೋಲು ಸಿಡಿಸಿದರು. ಹಿನ್ನಡೆ ಅಂತರವನ್ನು 1-2ಕ್ಕೆ ತಗ್ಗಿಸಿದರು.

40ನೇ ನಿಮಿಷದಲ್ಲಿ ಲಾಲ್ರೆನ್ಸಿಯಾಮಿ ಭಾರತದ 3ನೇ ಗೋಲಿಗೆ ಸಾಕ್ಷಿಯಾದರು. ಆದರೆ 48ನೇ ನಿಮಿಷದಲ್ಲಿ ಮುನ್ನುಗ್ಗಿ ಬಂದ ಮಲೇಶ್ಯ ಪರ ಹಾನಿಸ್‌ ಓನ್‌ ಗೋಲು ಸಿಡಿಸಿ ಅಂತರವನ್ನು 2-3ಕ್ಕೆ ಇಳಿಸಿದರು. ಅನಂತರದ ಹಂತದಲ್ಲಿ ಭಾರತ ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಮಲೇಶ್ಯದ ಎಲ್ಲ ಪ್ರಯತ್ನವನ್ನು ವಿಫ‌ಲಗೊಳಿಸಿತು. ಅಂತಿಮವಾಗಿ ಭಾರತ ವಿಜಯದ ನಗೆ ಬೀರಿತು.

ಮುಂದಿನ ಎದುರಾಳಿ ಕೊರಿಯಾ
ಭಾರತ ತನ್ನ ಮೊದಲ ಲೀಗ್‌ ಪಂದ್ಯದಲ್ಲಿ ಜಪಾನ್‌ ತಂಡವನ್ನು 4-1 ಗೋಲುಗಳಿಂದ, ಎರಡನೇ ಪಂದ್ಯದಲ್ಲಿ ಚೀನವನ್ನು 3-1 ಗೋಲುಗಳಿಂದ ಸೋಲಿಸಿತ್ತು. ಮುಂದಿನ ಲೀಗ್‌ ಪಂದ್ಯವನ್ನು ಆತಿಥೇಯ ಕೊರಿಯಾ ವಿರುದ್ಧ ಶನಿವಾರ ಆಡಲಿದೆ. ರವಿವಾರ ಪ್ರಶಸ್ತಿ ಸಮರ ಏರ್ಪಡಲಿದೆ.

“ಇಂದಿನ ಪಂದ್ಯದಲ್ಲಿ ಲಭಿಸಿದ ಹೆಚ್ಚಿನ ಅವಕಾಶವನ್ನು ನಾವು ಉತ್ತಮ ರೀತಿಯಲ್ಲಿ ಬಳಸಿಕೊಂಡೆವು. ಭಾರೀ ಸಂತೋಷವೇನೂ ಆಗಿಲ್ಲ. ಇನ್ನೂ ಉತ್ತಮ ಮಟ್ಟದ ಪ್ರದರ್ಶನ ಹೊರಹೊಮ್ಮಬೇಕಿದೆ. ಹೊಟೇಲ್‌ ಕೊಠಡಿಗೆ ತೆರಳಿ ತಪ್ಪುಗಳ ಬಗ್ಗೆ ಚರ್ಚಿಸಿ ಮುಂದಿನ ಕೊರಿಯಾ ವಿರುದ್ಧದ ಸೆಣಸಾಟಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಲಿದ್ದೇವೆ’ ಎಂಬುದಾಗಿ ನಾಯಕಿ ಸುನೀತಾ ಲಾಕ್ರಾ ಹೇಳಿದರು.

Comments are closed.