ಕರ್ನಾಟಕ

ಬಿಜೆಪಿಯವರಿಗೆ 15 ದಿನ ಕೊಡುತ್ತಿರುವುದು ಬಹುಮತ ಸಾಬೀತಿಗೋ, ಕುದುರೆ ವ್ಯಾಪಾರಕ್ಕೋ?: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಬಹುಮತ ಸಾಬೀತು ಪಡಿಸಲು ಬಿಜೆಪಿಯವರಿಗೆ 15 ದಿನ ಕಾಲಾವಕಾಶ ನೀಡಿದ್ದೇಕೆ? ಕುದುರೆ ವ್ಯಾಪಾರ ಮಾಡುವುದಕ್ಕಾ? ಎಂದು ರಾಜ್ಯಪಾಲರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಪ್ರಶ್ನಿಸಿದ್ದಾರೆ.

ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ನಗರದ ಶಾಂಘ್ರೀಲಾ ಹೋಟೆಲ್ ಬಳಿ ಮಾತನಾಡಿದ ಅವರು, ಬಿಜೆಪಿಯವರು ರಾಜಭವನವನ್ನೇ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆದಾಯ ತೆರಿಗೆ (ಐಟಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಐಟಿ ಹಾಗೂ ಇಡಿ ಮೂಲಕ ಬೆದರಿಸುತ್ತಿದ್ದು, ಕಾಂಗ್ರೆಸ್ ಶಾಸಕ ಆನಂದ್ ಸಿಂಗ್‌ಗೆ ಕೂಡ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿದರು.

ಸ್ಪಷ್ಟ ಬಹುಮತ ಸಿಗದಿದ್ದರೂ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಜನ ಬೀದಿಗೆ ಇಳಿದು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

‘ನಮ್ಮ ಶಾಸಕರ ರಕ್ಷಣೆ ಮಾಡಿಕೊಳ್ಳಬೇಕಾಗಿದ್ದು, ಅವರನ್ನು ಸುರಕ್ಷಿತ ಜಾಗದಲ್ಲಿ ಇರಿಸಲೇಬೇಕಿದೆ ಎಂದು ಹೇಳಿದರು. ಬಳಿಕ ಜೆಡಿಎಸ್ ಶಾಸಕರು ಶಾಂಘ್ರೀಲಾ ಹೋಟೆಲ್‌ನಿಂದ ಗಾಂಧಿ ಪ್ರತಿಮೆಯತ್ತ ತೆರಳಿ ಪ್ರತಿಭಟನೆಗೆ ಮುಂದಾದರು.

Comments are closed.