ರಾಷ್ಟ್ರೀಯ

ಕರ್ನಾಟಕ ರಾಜಕಾರಣದ ಪ್ರಭಾವ; ಗೋವಾ ಕಾಂಗ್ರೆಸ್, ಬಿಹಾರದ ಆರ್ ಜೆಡಿಯಿಂದ ಸರ್ಕಾರ ರಚನೆಯ ಹಕ್ಕು ಮಂಡನೆ

Pinterest LinkedIn Tumblr

ಪಣಜಿ : ಕರ್ನಾಟಕ ರಾಜಕಾರಣದ ಪ್ರಭಾವದಿಂದಾಗಿ ಗೋವಾ, ಬಿಹಾರ ರಾಜಕೀಯದಲ್ಲೂ ಚಟುವಟಿಕೆಗಳು ಗರಿಗೆದರಿವೆ. ಕರ್ನಾಟಕದ ರಾಜ್ಯಪಾಲರ ನಿರ್ಧಾರದಂತೆ ಗೋವಾದಲ್ಲಿಯೂ ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಗೋವಾ ಕಾಂಗ್ರೆಸ್ ಹಕ್ಕು ಮಂಡಿಸಿದೆ.

ಈ ಸಂಬಂಧ 13 ಕಾಂಗ್ರೆಸ್ ಶಾಸಕರು ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲೆ ಮೃದುಳಾ ಸಿನ್ದಾ ಅವರಿಗೆ ಮನವಿ ಸಲ್ಲಿಸಿದೆ. ಗೋವಾದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದೆ ಎಂದು ರಾಜ್ಯಪಾಲರು ಸಲ್ಲಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ, ಸರ್ಕಾರ ರಚನೆಗೆ ನಾಲ್ವರು ಸದಸ್ಯರ ಕೊರತೆ ಉಂಟಾಗಿತ್ತು.

14 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಗೋವಾ ಫಾರ್ವಡ್ ಪಾರ್ಟಿ ಮತ್ತು ಎಂಜಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡಿತ್ತು. ಮೂವರು ಪಕ್ಷೇತರ ಶಾಸಕರು ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಕರ್ನಾಟಕದ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವಂತೆ ಗೋವಾದಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ರಾಜ್ಯಪಾಲರ ಬಳಿ ಮನವಿ ಸಲ್ಲಿಸಲಾಗಿದೆ ಎಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾವ್ಳೇಕರ್ ಹೇಳಿದ್ದಾರೆ.

ಈ ಮಧ್ಯೆ ಬಿಹಾರದಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಆರ್ ಜೆಡಿಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸುವಂತೆ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ , ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಆರ್ ಜೆಡಿ ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿದ್ದು, ಕಾಂಗ್ರೆಸ್, ಸಿಪಿಐ( ಎಂಎಲ್ ) ಮತ್ತಿತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವಂತೆ ರಾಜ್ಯಪಾಲರ ಬಳಿ ಅವರು ಮನವಿ ಮಾಡಿಕೊಂಡಿದ್ದಾರೆ.

Comments are closed.