ಕರ್ನಾಟಕ

ಒಂದು ಕಡೆ ದೇವೇಗೌಡ-ಸಿದ್ದರಾಮಯ್ಯ, ಇನ್ನೊಂದು ಕಡೆ ಕುಮಾರಸ್ವಾಮಿ-ಜಮೀರ್ ಒಂದುಗೂಡುವಿಕೆ

Pinterest LinkedIn Tumblr


ಬೆಂಗಳೂರು: ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬುದು ರಾಜ್ಯದ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳು ಸಾಬೀತು ಮಾಡಿವೆ.

ಒಂದೆಡೆ, ರಾಜಕೀಯವಾಗಿ ವಿರೋಧಿಗಳಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಮಾತಿನ ಸಮರ ಸಾರಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದಾದರೆ, ಮತ್ತೂಂದೆಡೆ, ಹಿಂದೆ ಆತ್ಮೀಯರಾಗಿ ನಂತರ ದೂರವಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಜಮೀರ್‌ ಅಹಮದ್‌ ಒಂದುಗೂಡಿದ್ದಾರೆ.

ಜತೆಗೆ, ದೇವೇಗೌಡರ ಕುಟುಂಬದ ಜತೆ ರಾಜಕೀಯವಾಗಿ ವಿರೋಧಕಟ್ಟಿಕೊಂಡು ರಾಮನಗರ ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್‌ ಸಹ ಎಚ್‌.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ.

ಮತ್ತೆ ದೋಸ್ತಿ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಮತ ಹಾಕಿ ಜೆಡಿಎಸ್‌ನಿಂದ ಅಮಾನತುಗೊಂಡ ನಂತರ ಪರಸ್ಪರ ವಾಗ್ಧಾಳಿ ಮೂಲಕ ರಾಜಕೀಯವಾಗಿ ಸಮರ ಸಾರಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜಮೀರ್‌ ಅಹಮದ್‌ ಒಂದಾಗಿ ಕುತೂಹಲ ಮೂಡಿಸಿದ್ದಾರೆ.

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಂತರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ- ಜಮೀರ್‌ ಅಹಮದ್‌ ನಡುವಿನ ದ್ವೇಷ ಕಳೆದು ಮತ್ತೆ ಸ್ನೇಹ ಚಿಗುರಿದೆ.

ಎರಡು ದಿನಗಳ ಹಿಂದೆ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಎಂಟು ತಿಂಗಳ ನಂತರ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಎಚ್‌.ಡಿ.ಕುಮಾರಸ್ವಾಮಿ -ಜಮೀರ್‌ ಅಹಮದ್‌ ಉಭಯ ಕುಶಲೋಪರಿ ನಡೆಸಿದರು. ಇದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್‌ ಶಾಸಕರು ತಂಗಿದ್ದ ರೆಸಾರ್ಟ್‌ಗೆ ಕುಮಾರಸ್ವಾಮಿ ತೆರಳಿದ ವೇಳೆ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಜಮೀರ್‌ ಅಹಮದ್‌ ಅವರನ್ನು ಭೇಟಿಯಾದ ಕುಮಾರಸ್ವಾಮಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಸರ್ಕಾರ ರಚನೆಯ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಿದರು.

ನಂತರ ಗುರುವಾರ ವಿಧಾನಸೌಧದ ಎದುರು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕೂಡ ಅಲ್ಲಿ ಆಗಮಿಸಿದ್ದರು. ಕಾಂಗ್ರೆಸ್‌ ಶಾಸಕರು ಮತ್ತು ಮುಖಂಡರೊಂದಿಗೆ ದೇವೇಗೌಡರು ಚರ್ಚಿಸುತ್ತಿದ್ದ ವೇಳೆ ಜಮೀರ್‌ ಅಹಮದ್‌ ಪಕ್ಕದಲ್ಲೇ ನಿಂತಿದ್ದರು.

ಜಮೀರ್‌ ಹೆಗಲ ಮೇಲೆ ಕೈ ಇಟ್ಟು ದೇವೇಗೌಡರು ಮಾತನಾಡುತ್ತಿದ್ದರು. ನಂತರ ಜಮೀರ್‌ ಭುಜ ತಟ್ಟಿದ ದೇವೇಗೌಡರು ಅಲ್ಲಿಂದ ಮುಂದೆ ಸಾಗಿದರು. ಇನ್ನು ಧರಣಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ದೇವೇಗೌಡ ಸಹ ಪರಸ್ಪರ ಚರ್ಚಿಸುತ್ತಾ ಒಟ್ಟಿಗೆ ಕುಳಿತು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣರಾದರು.

Comments are closed.