ಕರ್ನಾಟಕ

ಮಂತ್ರಿ ಮಂಡಲ ರಚನೆ ವೇಳೆಯೇ ಈ ಸರಕಾರ ಬಿದ್ದರೂ ಅಚ್ಚರಿಯಿಲ್ಲ!

Pinterest LinkedIn Tumblr


ಮಂಡ್ಯ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ಅವಧಿ 3 ತಿಂಗಳು ಮಾತ್ರ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಸರಕಾರ ಮೂರು ತಿಂಗಳಿಗಿಂತ ಹೆಚ್ಚು ನಡೆಯಲು ಸಾಧ್ಯವೇ ಇಲ್ಲ. ಮಂತ್ರಿ ಮಂಡಲ ರಚನೆ ವೇಳೆಯೇ ಸರಕಾರ ಬಿದ್ದು ಹೋದರೂ ಅಚ್ಚರಿಯಿಲ್ಲ. ಕಾಂಗ್ರೆಸ್ ಸರಕಾರ ಇರಬಾರದು ಎಂಬುದೇ ರಾಜ್ಯದ ಜನಾದೇಶ. ಹೀಗಾಗಿ ಬದಲಿ ಸರಕಾರ ಬರಲೇ ಬೇಕು ಎಂದು ಡಿವಿಎಸ್‌ ಪ್ರತಿಪಾದಿಸಿದರು.

ಮತ್ತೆ ಅವಕಾಶ ಬಂದರೆ ಬಿಜೆಪಿ ಸರಕಾರ ರಚನೆ ಮಾಡುತ್ತದೆ. ನಮ್ಮದೇ ಏಕೈಕ ದೊಡ್ಡ ಪಕ್ಷ. ಹೀಗಾಗಿ ರಾಜ್ಯಪಾಲರು ನಮ್ಮನ್ನು ಸರಕಾರ ರಚಿಸಲು ಆಹ್ವಾನಿಸಿದರು ಎಂದು ಅವರು ನುಡಿದರು.

ಚುನಾವಣೆಗೂ ಮುನ್ನ ಕಾಂಗ್ರೆಸ್ ಜೆಡಿಎಸ್ ಕಚ್ಚಾಟವನ್ನು ರಾಜ್ಯದ ಜನತೆ ನೋಡಿದ್ದಾರೆ. ಒಬ್ಬರ ಮುಖ ಒಬ್ಬರು ನೋಡದ ರೀತಿ ರಾಜಕಾರಣ ಮಾಡಿದರು. ಈಗ ಅಧಿಕಾರಕ್ಕೋಸ್ಕರ ಒಟ್ಟಾಗಿದ್ದಾರೆ. ಕಾಂಗ್ರೆಸ್ಸಿಗರು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕುವ, ಬಹುಮತ ಬಂದ ಪಕ್ಷಕ್ಕೆ ಸಹಕರಿಸುತ್ತಾರೆ ಎಂಬ ವಿಶ್ವಾಸವಿತ್ತು.ಜೆಡಿಎಸ್‌ನವರು ಕೂಡ ಕಾಂಗ್ರೆಸ್ ಜೊತೆ ಹೋಗದಂತ ಭಾವನೆಯಲ್ಲಿದ್ದರು ಎಂದು ಸದಾನಂದ ಗೌಡ ಹೇಳಿದರು.

ಭಾರತೀಯ ಜನತಾ ಪಕ್ಷ ಕಾಂಗ್ರೆಸ್-ಜೆಡಿಎಸ್‌ಗಳಂತೆ ಕೊಳಕು ರಾಜಕಾರಣ ಮಾಡಿಲ್ಲ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಮಾದರಿಯಲ್ಲಿ ಗೌರವಯುತ ರಾಜಕಾರಣ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಬಿಜೆಪಿ ಯಾವುದೇ ಆಮಿಷವೊಡ್ಡಿಲ್ಲ. ಈ ಕುರಿತ ಆರೋಪಗಳೆಲ್ಲ ಸುಳ್ಳು. ಈಗ ಅವರಿಗೇ ಅಧಿಕಾರ ಸಿಕ್ಕಿದೆ. ಅವಶ್ಯಕತೆ ಇದ್ದರೆ ತನಿಖೆ ಮಾಡಲಿ. ಆ ಮೂಲಕ ಸತ್ಯಾಸತ್ಯತೆ ಹೊರತರಲಿ ಎಂದು ಡಿವಿಎಸ್‌ ಆಗ್ರಹಿಸಿದರು.

ಕೇಂದ್ರ ಸರಕಾರ ರಾಜಭವನವನ್ನು ದುರುಪಯೋಗ ಮಾಡಿದೆ ಎಂಬ ಆರೋಪವೂ ನಿರಾಧಾರ ಎಂದು ಅವರು ತಿಳಿಸಿದರು.

Comments are closed.