ಕರಾವಳಿ

ಉಡುಪಿ ಜಿಲ್ಲೆಗೆ ಯಾರಾಗುತ್ತಾರೆ ಉಸ್ತುವಾರಿ ಸಚಿವರು?

Pinterest LinkedIn Tumblr

ಉಡುಪಿ: ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಕೇವಲ 55 ಗಂಟೆಯಲ್ಲಿ ರಾಜೀನಾಮೆ ಕೊಟ್ಟಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಬುಧವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಂದೊಮ್ಮೆ ಬಿಜೆಪಿ ಸರಕಾರ ರಚನೆಯಾಗಿದ್ದರೆ ಉಡುಪಿ ಜಿಲ್ಲೆಯ ಐವರು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಗ್ಯಾರೆಂಟಿಯಾಗಿತ್ತು. ಅವರೇ ಜಿಲ್ಲಾ ಉಅಸ್ತುವಾರಿ ಸಚಿವರೂ ಆಗುವ ಸಂಭವವೂ ಇತ್ತು. ಆದರೇ ಈಗ ಅದು ಸಾಧ್ಯವಿಲ್ಲ. ಹಾಗಾದರೇ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ್‍ಯಾರು ಎಂಬುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್‌- ಜೆಡಿಎಸ್‌ ಸರಕಾರ ರಚಿಸಿದ್ದು ಈ ಪಕ್ಷಗಳಿಂದ ಜಿಲ್ಲೆಯಲ್ಲಿ ಯಾರೊಬ್ಬರೂ ವಿಧಾನಸಭಾ ಸದಸ್ಯರಿಲ್ಲ. ಸದ್ಯ ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್ ಹಿರಿಯ ನಾಯಕ ಕುಂದಾಪುರದ ಪ್ರತಾಪಚಂದ್ರ ಶೆಟ್ಟಿಯವರಿಗೆ ಅವಕಾಶಗಳು ಹೆಚ್ಚಿವೆ. ಸದ್ಯ ವಿಧಾನಪರಿಷತ್ ಸದಸ್ಯರಾಗಿ ಕಾಂಗ್ರೆಸ್ ಪಕ್ಷದ ಕುಂದಾಪುರ ಭಾಗದ ನಾಯಕರಾಗಿರುವ ಪ್ರತಾಪ ಶೆಟ್ಟಿಯವರು ನಾಲ್ಕು ಬಾರಿ ಸತತ ಶಾಸಕರಾದವರು. ಮೈತ್ರಿಕೂಟ ಸರಕಾರವಿರುವಾಗ ಸಾಮಾನ್ಯವಾಗಿ ಜಿಲ್ಲೆಗಳನ್ನು ಉಭಯ ಪಕ್ಷಗಳು ಹಂಚಿಕೊಳ್ಳುತ್ತವೆ. ಹೀಗಾಗಿ ದ.ಕ., ಉಡುಪಿ ಜಿಲ್ಲೆ ಎರಡೂ ಜಿಲ್ಲೆಯನ್ನು ಕಾಂಗ್ರೆಸ್‌ ವಹಿಸಿಕೊಳ್ಳಬಹುದು ಅಥವಾ ಒಂದು ಜಿಲ್ಲೆಯನ್ನು ಕಾಂಗ್ರೆಸ್‌ ಮತ್ತು ಇನ್ನೊಂದು ಜಿಲ್ಲೆಯನ್ನು ಜೆಡಿಎಸ್‌ ಹಂಚಿಕೊಳ್ಳಬಹುದೆನ್ನಲಾಗಿದೆ. ಉಡುಪಿ ಜಿಲ್ಲೆ ಜೆಡಿಎಸ್‌ ಪಾಲಿಗಾದರೆ ಹೊರಗಿನ ಸಚಿವರು ಇಲ್ಲಿಗೆ ಉಸ್ತುವಾರಿಯಾಗಿ ಬರಲಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾಗಿ ಸಚಿವರಾಗಬಲ್ಲ ವರ್ಚಸ್ಸು ಹೊಂದಿದ ಸ್ಥಳೀಯ ಜೆಡಿಎಸ್‌ ನಾಯಕರು ಇಲ್ಲವಾದ ಕಾರಣ ಹೊರಗಿನ ಜಿಲ್ಲೆಯವರು ಉಸ್ತುವಾರಿಯಾಗುವುದು ಅನಿವಾರ್ಯ.

ಇದುವರೆಗೆ ಉಸ್ತುವಾರಿ ಸಚಿವರು?
ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿದ್ದ ಒಂಬತ್ತು ಮಂದಿ ಶಾಸಕರಲ್ಲಿ ಕೆ. ಜಯಪ್ರಕಾಶ್‌ ಹೆಗ್ಡೆ, ವಸಂತ ಸಾಲ್ಯಾನ್‌, ರೋಶನ್‌ ಬೇಗ್‌, ಸುಮಾ ವಸಂತ್‌, ಮೋಟಮ್ಮ, ಡಿ.ಟಿ. ಜಯಕುಮಾರ್‌, ಡಾ| ವಿ.ಎಸ್‌. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್‌ ಮಧ್ವರಾಜ್‌ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಈ ಬಾರಿ ಹೊರಗಿನ ವ್ಯಕ್ತಿಯನ್ನು ಸಚಿವರನ್ನಾಗಿ ಮಾಡ್ತಾರಾ ಅಥವಾ ಪ್ರತಾಪ ಶೆಟ್ಟಿಯವರಿಗೆ ಮಣೆ ಹಾಕುತ್ತಾರಾ? ಎಂಬುದು ಪ್ರಶ್ನೆಯಾಗಿದೆ.

Comments are closed.