ರಾಷ್ಟ್ರೀಯ

ಪ್ರೀತಿಸಿದ ಯುವತಿ ವರಿಸಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಯುವಕನ ಬಂಧನ

Pinterest LinkedIn Tumblr


ಆಗ್ರಾ: ಪ್ರೀತಿಸಿದ ಯುವತಿಯನ್ನು ವರಿಸಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಯುವಕನನ್ನು ಕ್ವಾರ್ಸಿ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಯುವಕನ ಪೋಷಕರು ಹಾಗೂ ಕೆಲವು ಬಲಪಂಥೀಯ ಸಂಘಟನೆಗಳು ಠಾಣೆಯ ಎದುರು ಉಗ್ರ ಪ್ರತಿಭಟನೆ ನಡೆಸಿದ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಪ್ರೀತಿಸಿದ ಯುವತಿಯ ಒತ್ತಾಯಕ್ಕೆ ಮಣಿದು ತಮ್ಮ ಮಗ ಇಸ್ಲಾಂ ಧರ್ಮ ಸ್ವೀಕರಿಸಿದ್ದಾನೆ ಎಂದು ಯುವಕನ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲೆಯ ನಾಗ್ಲಾ ಪಟ್ಟಾರಿಯಾ ಪ್ರದೇಶದ ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಬರುಲಾ ಜಾಫ್ರಾಬಾದ್ ಪ್ರದೇಶದ ಯುವಕ, ಕಳೆದ 8 ತಿಂಗಳ ಹಿಂದೆಯೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದು, ಆದಿಲ್ ಎಂದು ಹೆಸರು ಕೂಡ ಬದಲಿಸಿಕೊಂಡಿದ್ದ. ಶನಿವಾರ ನೆರೆಮನೆಯ ಮುಸ್ಲಿಂ ಯುವತಿಯನ್ನು ವಿವಾಹವಾಗುತ್ತೇನೆ ಎಂದು ಪಟ್ಟು ಹಿಡಿದ ಕಾರಣ ಈತ ಮತಾಂತರಗೊಂಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ವೇದ್ ಪ್ರಕಾಶ್ ತಿಳಿಸಿದ್ದಾರೆ.

‘ನಾನು ಯಾರೊಬ್ಬರ ಒತ್ತಾಯಕ್ಕೆ ಮಣಿದು ಇಸ್ಲಾಂ ಧರ್ಮ ಸ್ವೀಕರಿಸಿಲ್ಲ. ಬದಲಿಗೆ ನನ್ನ ಸ್ವ ಇಚ್ಛೆಯಿಂದಲೇ ಇಸ್ಲಾಂ ಸ್ವೀಕರಿಸಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದು ಮತಾಂತರಗೊಂಡ ಯುವಕ ಪ್ರಶ್ನಿಸಿದ್ದಾನೆ.

ಯುವಕ ಸ್ವ-ಇಚ್ಛೆಯಿಂದಲೇ ಇಸ್ಲಾಂ ಧರ್ಮ ಸ್ವೀಕರಿಸಿದ್ದಾನೆ’ ಎಂದು ಆಲಿಗಢ್‌ನ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಸಾಹ್ನಿ ಸ್ಪಷ್ಟಪಡಿಸಿದ್ದಾರೆ.

‘ನನ್ನ ಮಗನ ಜೊತೆಯಲ್ಲಿ ವಾಸೀಂ ಅಲಿಯಾಸ್ ಚೋಟು ಎಂಬಾತ ಕೆಲಸ ಮಾಡುತ್ತಿದ್ದ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೇ ತನ್ನ ಸಹೋದರಿಯನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇನೆಂದು ನನ್ನ ಮಗನಿಗೆ ಪ್ರೇರೆಪಿಸುತ್ತಿದ್ದ. ಈತನ ಕುತಂತ್ರದಿಂದಲೇ ನನ್ನ ಮಗ ಇಸ್ಲಾಂ ಸ್ವೀಕರಿಸಿದ್ದು’ ಎಂದು ಯುವಕನ ತಾಯಿ ದೂರಿದ್ದಾರೆ.

ಯುವಕನಿಗೆ ಇಸ್ಲಾಂ ಧರ್ಮ ಸ್ವೀಕಾರಿಸುವಂತೆ ಒತ್ತಡ ಹೇರಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಬಿಜೆಪಿ ಆಲಿಘರ್ ಘಟಕದ ಪ್ರಧಾನ ಕಾರ್ಯದರ್ಶಿ ರೀತಾ ರಜಪೂತ್ ಒತ್ತಾಯಿಸಿದ್ದಾರೆ.

Comments are closed.