ನಿಫಾ ವೈರಸ್ ಬಾಧೆಗೊಳಗಾದವರಿಗೆ ಚಿಕಿತ್ಸೆ ನೀಡಿದ ಪರಿಣಾಮ ಸೋಂಕು ತಗುಲಿ ಸಾವನ್ನಪ್ಪಿದ ದಾದಿ ಲಿನಿ ಸಾವಿಗೂ ಮುನ್ನ ಬರೆದಿರುವ ಕಣ್ಣು ತೋಯಿಸುವ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಕಲ್ಲಿಕೋಟೆಯ ಪೆರಂಬ್ರಾ ತಾಲೂಕು ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದ ಲಿನಿ (31) ಸೋಮವಾರ ಮೃತ ಪಟ್ಟಿದ್ದರು. ನಿಪಾ ವೈರಸ್ ಬಾಧಿತ ರೋಗಿಯನ್ನು ಆರೈಕೆ ಮಾಡುತ್ತಿದ್ದ ಲಿನಿ ದೇಹಕ್ಕೂ ಸಹ ಆ ಮಾರಣಾಂತಿಕ ವೈರಸ್ ಅಂಟಿದ ಪರಿಣಾಮ ಅವರು ದುರಂತ ಸಾವನ್ನು ಕಾಣುವಂತಾಯಿತು.
ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ ತನ್ನ ಸಾವಿನ ಬಳಿಕ ಮಕ್ಕಳ ಬಗ್ಗೆ ಕಾಳಜಿ ಇರಲಿ ಎಂದು ಪತಿಗೆ ಬರೆದ ಪತ್ರ ಓದಿದರೆ ಬಿಕ್ಕಿ ಬಿಕ್ಕಿ ಅಳುವಂತಿದೆ. ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಈ ಪತ್ರವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಆಕೆಯ ಪತ್ರದ ಸಾರಾಂಶ ಹೀಗಿದೆ:
“ಸಜೀಸ್….ನಾನು ಮರಳಿ ಬಾರದ ಲೋಕಕ್ಕೆ ಹೋಗುತ್ತಿದ್ದೇನೆ. ಮತ್ತೆ ನಿಮ್ಮನ್ನು ನೋಡುತ್ತೇನೆಂಬ ಭರವಸೆ ಇಲ್ಲ. ಕ್ಷಮಿಸಿ. ನಮ್ಮ ಮಕ್ಕಳ ಬಗ್ಗೆ ಕಾಳಜಿ ಇರಲಿ. ಕುಂಜು ಮುಗ್ಧ ಹುಡುಗ. ಆತನನ್ನು ಗಲ್ಫ್ಗೆ ಕರೆದೊಯ್ಯಿ. ಅವನು ನಮ್ಮ ತಂದೆಯಂತೆ ಏಕಾಂಗಿಯಾಗಬಾರದು. Please… With lots of love”.
7 ಮತ್ತು 2 ವರ್ಷ ಪ್ರಾಯದ ಇಬ್ಬರು ಗಂಡು ಮಕ್ಕಳ ತಾಯಿಯಾಗಿರುವ ಲಿನಿಯ ಅಸಾಧಾರಣ ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ಮತ್ತು ಗೌರವಗಳು ಹರಿದು ಬರುತ್ತಿವೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆಕೆಯ ಸಾವು ‘ ಬಲಿದಾನಕ್ಕೆ ಸಮ ‘ ಎಂದು ವ್ಯಾಖ್ಯಾನಿಸಿದ್ದಾರೆ.
ಸೇವಾ ತತ್ಪರ ದಾದಿಯರಿಗೆ ನೀಡಲು ಲಿನಿ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸುವಂತೆ ಕೋರಿ ಪ್ರಖ್ಯಾತ ಲೇಖಕ, ವಿಚಾರವಾದಿ ಎಮ್,ಎನ್ ಕರಸೆರಿ ಸಿಎಂಗೆ ಟ್ವೀಟ್ ಮಾಡಿದ್ದಾರೆ.
Comments are closed.