ಕರ್ನಾಟಕ

ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯ ಬಂದ್‌: ಹೋರಾಟ ಆರಂಭಿಸಿದ ಬಿಜೆಪಿ

Pinterest LinkedIn Tumblr


ಬೆಂಗಳೂರು: ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ 1 ಲಕ್ಷ ರೂ.ವರೆಗಿನ ಸಾಲ ಹಾಗೂ ಜತೆಗೆ ಖಾಸಗಿಯಾಗಿ ಪಡೆದಿರುವ ಸಾಲ ಮನ್ನಾ ಮಾಡದಿದ್ದರೆ ರಾಜ್ಯ ಬಂದ್‌ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಈ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಯವರಿಗೆ ಹೋರಾಟದ ಮುನ್ಸೂಚನೆ ನೀಡಿರುವ ಯಡಿಯೂರಪ್ಪ, ನೀವು ಕೊಟ್ಟಿರುವ ಭರವಸೆ ಈಡೇರಿಸದಿದ್ದರೆ ರಾಜ್ಯವ್ಯಾಪಿ ರೈತರನ್ನು ಬೀದಿಗಿಳಿ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ ಎಂದು ಗುಡುಗಿದ್ದಾರೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ವಿರುದ್ಧ ಬಿಜೆಪಿ ಬುಧವಾರ ಹಮ್ಮಿಕೊಂಡಿದ್ದ “ಜನಮತ ವಿರೋಧಿ ದಿನ’ದ ಅಂಗವಾಗಿ ನಗರದ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೇವೇಗೌಡ ಆ್ಯಂಡ್‌ ಕಂಪನಿ, ಕುಮಾರಸ್ವಾಮಿ ಆ್ಯಂಡ್‌ ಕಂಪನಿ ವ್ಯವಹಾರ ನಡೆಯಲು ಅವಕಾಶ ನೀಡುವುದಿಲ್ಲ. ಜೆಡಿಎಸ್‌ಗೆ ಆಡಳಿತ ನೀಡಿರುವುದಕ್ಕೆ ಕಾಂಗ್ರೆಸ್‌ನ ಹಲವು ಶಾಸಕರು, ಕಾರ್ಯಕರ್ತರು ಅತೃಪ್ತರಾಗಿದ್ದಾರೆ. ಬೇಸರಗೊಂಡಿರುವ ಕಾಂಗ್ರೆಸ್‌ ಮುಖಂಡರು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಬಿಜೆಪಿಗೆ ಬರುವಂತೆ ಮುಕ್ತ ಸ್ವಾಗತ ನೀಡುತ್ತೇನೆ. ನಮ್ಮೊಂದಿಗೆ ಕೈಜೋಡಿಸಿ ಎಂದು ಬಹಿರಂಗ ಆಹ್ವಾನ ನೀಡಿದರು.

ಚುನಾವಣೆಗೂ ಮೊದಲು ಕುಮಾರಸ್ವಾಮಿಯವರು ರಾಷ್ಟ್ರೀಕೃತ ಬ್ಯಾಂಕ್‌ ಇಲ್ಲವೇ ಸಹಕಾರಿ ಬ್ಯಾಂಕ್‌ಗಳಲ್ಲಿನ ಒಂದು ಲಕ್ಷ ರೂ.ವರೆಗಿನ ಸಾಲ ಸೇರಿದಂತೆ ರೈತರ ಖಾಸಗಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ರಾಜ್ಯಕ್ಕೇ ಕರಾಳ ದಿನ. ಹಾಗಾಗಿ ಬಿಜೆಪಿ ವತಿಯಿಂದ ನಾವು ಕಪ್ಪುಪಟ್ಟಿ ಧರಿಸಿ ಖಂಡಿಸುತ್ತೇವೆ ಎಂದು ಹೇಳಿದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಅವರವನ್ನು ಜೀವಂತವಾಗಿ ಕೊಂದವರು ಕಾಂಗ್ರೆಸ್ಸಿಗರು. ಇಂದು ಅದೇ ಕಾಂಗ್ರೆಸ್‌ನೊಂದಿಗೆ ಹೋಗಿರುವ ಕುಮಾರಸ್ವಾಮಿಯವರು ಯಾವ ಮುಖ ಹೊತ್ತು ಜಯಪ್ರಕಾಶ್‌ ನಾರಾಯಣ್‌ ಜೊತೆ ತಮ್ಮ ಫೋಟೋ ಹಾಕಿಕೊಂಡಿದ್ದಾರೆ. ಜೆಡಿಎಸ್‌ನೊಂದಿಗೆ ಹೋದ ಯಾರೊಬ್ಬರು ಉದ್ದಾರವಾಗುವುದಿಲ್ಲ ಎಂಬುದು ಮೂರು ತಿಂಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ರಾಜ್ಯದ ಜನ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದರೆ, ಜೆಡಿಎಸ್‌ ಪಕ್ಷವನ್ನು ಲೆಕ್ಕಕ್ಕೇ ಇಟ್ಟಿಲ್ಲ. ಜನಾದೇಶ ಧಿಕ್ಕರಿಸಿ ರಾಜಕಾರಣ ಮಾಡಲು ಹೊರಟ ಪಕ್ಷಗಳ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ. ಅಪವಿತ್ರ ಮೈತ್ರಿಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ನೆಲಕಚ್ಚಿರುವಾಗ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರ ಸ್ಥಿತಿ ಏನು. ಜನ ತಿರಸ್ಕರಿಸಿದ್ದಾರೆ ಎಂದು ಗೊತ್ತಿದ್ದರೂ ಯಾರ ವಿಜಯೋತ್ಸವ ಆಚರಣೆಗೆ ಬರುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಗೆಲ್ಲಿಸಿಕೊಡುವುದು ನನ್ನ ಗುರಿ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಜೆಡಿಎಸ್‌ ಪಕ್ಷವು ಮೊದಲು ಆನೆಯನ್ನು (ಬಿಎಸ್‌ಪಿ) ಪ್ರೀತಿ ಮಾಡಿತು. ನಂತರ ಓವೈಸಿಯೊಂದಿಗೆ ಡೇಟಿಂಗ್‌ಗೆ ಹೋಯಿತು. ಕೊನೆಗೆ ಕಾಂಗ್ರೆಸ್‌ ಜತೆಗೆ ಮದುವೆಯಾಯಿತು. ಜೆಡಿಎಸ್‌ನವರು ಯಾವಾಗ, ಯಾರ ಜೊತೆ ಇರುತ್ತಾರೆಂಬುದು ಗೊತ್ತಾಗುವುದಿಲ್ಲ ಎಂದು ಹೇಳಿದರು.

ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ಶಾಸಕರಾದ ಅರವಿಂದ ಲಿಂಬಾವಳಿ, ರವಿ ಸುಬ್ರಹ್ಮಣ್ಯ, ಎಸ್‌.ಆರ್‌.ವಿಶ್ವನಾಥ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ರಾಜ್ಯ ಕಾರ್ಯದರ್ಶಿ ಡಾ.ತೇಜಸ್ವಿನಿ ಗೌಡ ಇತರರು ಉಪಸ್ಥಿತರಿದ್ದರು.

ಅಖಾಡಕ್ಕೆ ಬನ್ನಿ
ಚುನಾವಣೆಗೂ ಮೊದಲು ಎಚ್‌.ಡಿ.ದೇವೇಗೌಡರು ಜೆಡಿಎಸ್‌ಗೆ ಬಹುಮತ ಬಾರದಿದ್ದರೆ ವಿರೋಧ ಪಕ್ಷದಲ್ಲಿರುವುದಾಗಿ ಹೇಳಿದ್ದರು. ಹಾಗಿದ್ದಾಗ ಕಾಂಗ್ರೆಸ್‌ನೊಂದಿಗೆ ಮೈತ್ರಿ ಹೇಗೆ ಮಾಡಿಕೊಂಡಿದ್ದೀರಿ ದೇವೇಗೌಡರೇ ? ಈಗಲೂ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ. ಬಿಜೆಪಿ 150 ಸ್ಥಾನ ಗೆಲ್ಲದಿದ್ದರೆ ನೀವು ಹೇಳಿದಂತೆ ಕೇಳುತ್ತೇನೆ.
– ಬಿ.ಎಸ್‌.ಯಡಿಯೂರಪ್ಪ

ಸಿದ್ದರಾಮಯ್ಯ ಪರ ಬ್ಯಾಟಿಂಗ್‌
ಜನಮತ ವಿರೋಧಿ ದಿನ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ನಡೆಸಿದ ಯಡಿಯೂರಪ್ಪ, ಸಮ್ಮಿಶ್ರ ಸರ್ಕಾರದ ಪ್ರಮುಖ ತೀರ್ಮಾನಗಳಲ್ಲಿ ಅವರನ್ನು ಹೊರಗಿಡಲಾಗಿದೆ ಎಂದು ಹೇಳಿದರಲ್ಲದೆ, ಸಿದ್ದರಾಮಯ್ಯನವರೇ ನಿಮ್ಮನ್ನು ಅಪಮಾನ ಮಾಡಿದ ಪಕ್ಷದಲ್ಲಿ ಹೇಗೆ ಮುಂದುವರಿಯುತ್ತೀರಿ? ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಮುಳುಗಿಸಲು ಹೊರಟಿರುವ ಜೆಡಿಎಸ್‌ ತೊರೆದು ಹೊರಬನ್ನಿ ಎಂದು ಹೇಳಿದರು.

“ಸಿದ್ದರಾಮಯ್ಯನವರೆ, ನೀವು ಅಧಿಕಾರದಲ್ಲಿದ್ದಾಗ ಹೈಕಮಾಂಡ್‌ಗೆ ಹಣ ನೀಡುತ್ತಿದ್ದಿರಿ ಎಂಬ ಕಾರಣಕ್ಕೆ ರಾಹುಲ್‌ ಗಾಂಧಿ ನಿಮ್ಮನ್ನು ಅಪ್ಪಿಕೊಂಡಿದ್ದರು. ನೀವೇ ಹೈಕಮಾಂಡ್‌ ಎನ್ನುವಂತೆ ವರ್ತಿಸುತ್ತಿದ್ದರು. ಆದರೆ ಸರ್ಕಾರ ರಚನೆ ವೇಳೆ ನಿಮ್ಮನ್ನು ಕಡೆಗಣಿಸಿ ಕುಮಾರಸ್ವಾಮಿಯವರನ್ನಷ್ಟೇ ದೆಹಲಿಗೆ ಕರೆಸಿಕೊಂಡರು. ಹೀಗೆ ಅವಮಾನ ಮಾಡಿದ ಪಕ್ಷದಲ್ಲಿ ಹೇಗೆ ಮುಂದುವರಿಯುತ್ತೀರಿ. ಕುರುಬ ಸಮಾಜ ಇದನ್ನು ಸಹಿಸುವುದೇ ಎಂದು ತಿಳಿಸಿದರು.

Comments are closed.