ಕರ್ನಾಟಕ

ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ, ನಿಮಗೆ ಬಿ ಫಾರಂ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದ್ದು ನೀವೇ ಅಭ್ಯರ್ಥಿಗಳು. ನಾಳೆಯಿಂದಲೇ ಕ್ಷೇತ್ರದಲ್ಲಿ ಕೆಲಸ ಆರಂಭಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋತ ಅಭ್ಯರ್ಥಿಗಳಿಗೆ ಕರೆ ನೀಡಿದ್ದಾರೆ.

ಗುರುವಾರ ಖಾಸಗಿ ಹೋಟೆಲ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ 110 ಅಭ್ಯರ್ಥಿಗಳ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಬರಬಹುದು. ಇಲ್ಲವೇ ಬಿಜೆಪಿ ಸರ್ಕಾರವೂ ರಚನೆಯಾಗಬಹುದು. ಯಾರೂ ಧೃತಿಗೆಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ನಿಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದೆ. ಮತ್ತೆ ಚುನಾವಣೆ ಎದುರಾದರೆ ನೀವು ಕಣಕ್ಕಿಳಿದು ಗೆಲ್ಲಬೇಕು. ಈಗ ಚುನಾವಣೆ ನಡೆದರೆ ಬಿಜೆಪಿಗೆ 150 ಸ್ಥಾನ ಖಚಿತ ಹೀಗಾಗಿ, ತತಕ್ಷಣದಿಂದ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು ಎನ್ನಲಾಗಿದೆ.

ಚುನಾವಣೆಯಲ್ಲಿ ಹತ್ತರಿಂದ ಹದಿನೈದು ಸ್ಥಾನ ಗಳಿಸಿದ್ದರೆ ನಾವು ಸರ್ಕಾರ ರಚನೆ ಮಾಡಲು ಯಾವುದೇ ಅಡ್ಡಿ ಇರಲಿಲ್ಲ. 104 ಸ್ಥಾನ ಗಳಿಸಿದರೂ ಅಧಿಕಾರ ನಡೆಸಲು ಪ್ರತಿಪಕ್ಷಗಳು ಬಿಟ್ಟಿಲ್ಲ. ಹೀಗಾಗಿ, ನಾವು ಇದನ್ನು ಸವಾಲಾಗಿ ಸ್ವೀಕರಿಸಿ ಮುಂದುವರಿಯಬೇಕು. ಸೋಲಿನ ಕಾರಣಗಳೇನು ಎಂಬುದರ ಆತ್ಮಾವಲೋಕನ ಮಾಡಿಕೊಂಡು ಎಲ್ಲೆಲ್ಲಿ ಸಮಸ್ಯೆಯಾಯಿತು ಎಂಬುದನ್ನು ಪತ್ತೆ ಹಚ್ಚಿ ಸರಿಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು ಎಂದು ಹೇಳಲಾಗಿದೆ. ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಉಪಸ್ಥಿತರಿದ್ದರು.

Comments are closed.