ಮನೋರಂಜನೆ

ಸ್ಯಾಂಡಲ್‍ವುಡ್‌ಗೆ ಅಂಬರೀಶ್ ಪುತ್ರ ಅಭಿಷೇಕ್ ’ಅಮರ್’ ಚಿತ್ರದಿಂದ ಪ್ರವೇಶ

Pinterest LinkedIn Tumblr


ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಸ್ಯಾಂಡಲ್‍ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಚೊಚ್ಚಲ ಚಿತ್ರದ ’ಅಮರ್’ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಟ್ವಿಟರ್‌‍ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿಬರುತ್ತಿದೆ.

ಇದೇ ಮೇ 28ರಿಂದ ಸಿನಿಮಾ ಆರಂಭವಾಗಲಿದೆ ಎಂದು ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ. ಅಂಬರೀಶ್ ಹುಟ್ಟುಹಬ್ಬಕ್ಕೂ (ಮೇ 29) ಒಂದು ದಿನ ಮುನ್ನ ಜೆಪಿ ನಗರದ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡುವುದಾಗಿ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ಒಂದು ವಾರದ ಬಳಿಕ ಸಿನಿಮಾವನ್ನು ಬೆಂಗಳೂರಿನ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಲಾಗುತ್ತಿದ್ದು ಈ ಕಾರ್ಯಕ್ರಮಕ್ಕೆ ಅಂಬರೀಶ್ ಗೆಳೆಯರು, ಚಿತ್ರರಂಗದ ಗಣ್ಯರು ಆಗಮಿಸಲಿದ್ದಾರೆ ಎಂದಿದ್ದಾರೆ ಅಂಬರೀಶ್ ಅವರ ಬಹಳಷ್ಟು ಚಿತ್ರಗಳನ್ನು ನಿರ್ಮಿಸಿರುವ ಸಂದೇಶ್ ನಾಗರಾಜ್.

ಅಮರ್ ಫಸ್ಟ್ ಲುಕ್ ಪೋಸ್ಟರ್
ಅಂಬರೀಶ್ ಹುಟ್ಟುಹಬ್ಬದ (ಮೇ 29) ದಿನವೇ ಸಿನಿಮಾ ಲಾಂಚ್ ಮಾಡಲು ನಿರ್ಧರಿಸಿದ್ದೆವು. ಆದರೆ ಅಂದು ಮಂಗಳವಾರವಾದ ಕಾರಣ ಒಂದು ದಿನ ಮುಂಚಿತವಾಗಿ ಸಣ್ಣದಾಗಿ ಪೂಜೆ ಮಾಡಿ ಆರಂಭಿಸುತ್ತಿದ್ದೇವೆ. ಒಂದು ವಾರದ ಬಳಿಕ ಅದ್ದೂರಿಯಾಗಿ ಸಿನಿಮಾಗೆ ಚಾಲನೆ ನೀಡುತ್ತಿರುವುದಾಗಿ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾಗೆ ತಾನ್ಯಾ ಹೋಪ್ ನಾಯಕಿ. ತಂತ್ರಜ್ಞರು, ಕಲಾವಿದರು ಎಲ್ಲರೂ ಸರ್ವಸನ್ನದ್ಧರಾಗಿದ್ದು ಯಾವಾಗ ಬೇಕಿದ್ದರೂ ಶೂಟಿಂಗೆ ರೆಡಿಯಾಗಿದ್ದಾರೆ. ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ಇದೇ ಹೆಸರಿನಲ್ಲಿ ಅವರ 100ನೇ ಚಿತ್ರ ಅಮರ್ ಅಕ್ಬರ್ ಆಂಟೋನಿ ಸೇರಿದಂತೆ ಅಂಬರೀಶ್ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Comments are closed.