ಕರ್ನಾಟಕ

ಕಾಂಗ್ರೆಸ್‌ ನಿಂದ ಸಚಿವರ ಸಂಭಾವ್ಯ ಪಟ್ಟಿ?

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಪಡೆಸಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಆರಂಭವಾಗಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ಸೇರಿ ಸಂಪುಟ ವಿಸ್ತರಣೆಯ ಕುರಿತು ಸಮಾಲೋಚನೆ ನಡೆಸಿದರು.

ಕಾಂಗ್ರೆಸ್‌ ನಾಯಕರು ಶುಕ್ರವಾರವೇ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಕುರಿತು ಹೈ ಕಮಾಂಡ್‌ ಜೊತೆ ಚರ್ಚಿಸಲು ತೀರ್ಮಾನಿಸಿದ್ದರು. ಆದರೆ, ಮೇ 26 (ಇಂದು) ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ತೀರ್ಮಾನಿಸಿರುವುದರಿಂದ ಎಲ್ಲ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಗಳು ಆಯಾ ರಾಜ್ಯಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವೈಫ‌ಲ್ಯಗಳನ್ನು ಜನತೆಗೆ ತಿಳಿಸುವಂತೆ ಕಾಂಗ್ರೆಸ್‌ ಹೈ ಕಮಾಂಡ್‌ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರಾಜ್ಯ ಕಾಂಗ್ರೆಸ್‌ ನಾಯಕರು ದೆಹಲಿಗೆ ತೆರಳಲಿದ್ದಾರೆ.

ರಾಜ್ಯ ಕಾಂಗ್ರೆಸ್‌ ನಾಯಕರು ಈಗಾಗಲೇ ಜಿಲ್ಲಾವಾರು ಹಾಗೂ ಜಾತಿ ಲೆಕ್ಕಾಚಾರದಲ್ಲಿ ಸಚಿವ ಆಕಾಂಕ್ಷಿಗಳ ಪಟ್ಟಿ ಸಿದ್ದಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು. ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಅವರೊಂದಿಗೆ ಸಮಾಲೋಚನೆ ನಡೆಸಿ, ಅವರ ಸೂಚನೆ ಮೇರೆಗೆ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೈಕಮಾಂಡ್‌ ನಾಯಕರ ಒಪ್ಪಿಗೆ ಪಡೆದು ಮೇ 29 ಅಥವಾ 30 ಕ್ಕೆ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್‌ ಪಾಲಿಗೆ ಬಂದಿರುವ 22 ಸಚಿವ ಸ್ಥಾನಗಳಲ್ಲಿ 20 ಸ್ಥಾನಗಳನ್ನು ಭರ್ತಿ ಮಾಡಿಕೊಂಡು ಉಳಿದ ಎರಡು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯೂ ಕೂಡ ದೆಹಲಿಗೆ ತೆರಳಿ ಕಾಂಗ್ರೆಸ್‌ ಹೈ ಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ನ ಸಂಭಾವ್ಯ ಸಚಿವಾಕಾಂಕ್ಷಿಗಳ ಪಟ್ಟಿ
ಬೀದರ್‌-ರಾಜಶೇಖರ್‌ ಪಾಟೀಲ್‌/ರಹೀಮ್‌ ಖಾನ್‌.
– ಕಲಬುರಗಿ- ಪ್ರಿಯಾಂಕ್‌ ಖರ್ಗೆ/ ಅಜಯ್‌ ಸಿಂಗ್‌
– ಕೊಪ್ಪಳ-ಅಮರೇಗೌಡ ಬಯ್ನಾಪುರ
– ಬಳ್ಳಾರಿ-ಆನಂದ ಸಿಂಗ್‌/ ನಾಗೇಂದ್ರ
– ವಿಜಯಪುರ-ಎಂ.ಬಿ.ಪಾಟೀಲ್‌/ಶಿವಾನಂದ ಪಾಟೀಲ್‌
– ಬಾಗಲಕೋಟೆ-ಎಸ್‌.ಆರ್‌. ಪಾಟೀಲ್‌.
– ಬೆಳಗಾವಿ-ಸತೀಶ್‌ ಜಾರಕಿಹೊಳಿ/ಲಕ್ಷ್ಮೀ ಹೆಬ್ಟಾಳ್ಕರ್‌
– ಧಾರವಾಡ-ಸಿ.ಎಸ್‌.ಶಿವಳ್ಳಿ
– ಗದಗ-ಎಚ್‌.ಕೆ.ಪಾಟೀಲ್‌
– ಹಾವೇರಿ-ಬಿ.ಸಿ.ಪಾಟೀಲ್‌/ಆರ್‌.ಶಂಕರ್‌
– ಉತ್ತರ ಕನ್ನಡ-ಆರ್‌.ವಿ.ದೇಶಪಾಂಡೆ
– ದಾವಣಗೆರೆ-ಶಾಮನೂರು ಶಿವಶಂಕರಪ್ಪ
– ಚಿತ್ರದುರ್ಗ-ರಘುಮೂರ್ತಿ
– ಚಾಮರಾಜನಗರ-ಪುಟ್ಟರಂಗಶೆಟ್ಟಿ/ಆರ್‌. ನರೇಂದ್ರ
– ರಾಮನಗರ-ಡಿ.ಕೆ.ಶಿವಕುಮಾರ್‌
– ಕೋಲಾರ-ನಾಗೇಶ್‌
– ಚಿಕ್ಕಬಳ್ಳಾಪುರ-ಶಿವಶಂಕರ ರೆಡ್ಡಿ/ಡಾ.ಸುಧಾಕರ್‌
– ಬೆಂಗಳೂರು ನಗರ-ಕೆ.ಜೆ.ಜಾರ್ಜ್‌, ರಾಮಲಿಂಗಾ ರೆಡ್ಡಿ,ರೋಷನ್‌ ಬೇಗ್‌, ದಿನೇಶ್‌ ಗುಂಡೂರಾವ್‌
– ದಕ್ಷಿಣ ಕನ್ನಡ – ಯು.ಟಿ.ಖಾದರ್‌
– ಉಡುಪಿ – ಪ್ರತಾಪ್‌ಚಂದ್ರ ಶೆಟ್ಟಿ

Comments are closed.