ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ತನ್ನ ಆಡಳಿತ ಆರಂಭ ಮಾಡಿದೆ. ಆದರೆ ರಾಜ್ಯದಲ್ಲಿ ಇನ್ನಾದರೂ ಖಾತೆ ಹಂಚಿಕೆ ಪ್ರಕ್ರಿಯೆ ಮಾತ್ರ ಕಗ್ಗಂಟಾಗಿಯೇ ಉಳಿದಿದೆ.
ಸಚಿವರ ಆಯ್ಕೆ ಮೊದಲೇ ಖಾತೆ ಹಂಚಿಕೆ ಲೆಕ್ಕಾಚಾರ ನಡೆದಿದ್ದು, ಪ್ರಮುಖ 8 ಖಾತೆಗಳಿಗೆ ಜೆಡಿಎಸ್ ಬೇಡಿಕೆ ಇರಿಸಿದೆ. ಹಣಕಾಸು, ಕಂದಾಯ, ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ, ಬೆಂಗಳೂರು ಅಭಿವೃದ್ದಿ, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಪ್ರಮುಖ 8 ಖಾತೆಗಳಿಗೆ ಜೆಡಿಎಸ್ ಪಟ್ಟು ಹಿಡಿದಿದೆ.
ಪ್ರಮುಖ ಖಾತೆಗಳ ಬೇಡಿಕೆಯ ಬಗ್ಗೆ ಪಟ್ಟಿ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ರವಾನೆ ಮಾಡಿದ್ದಾರೆ. ಆದರೆ ಜೆಡಿಎಸ್ ಗೆ ಇಂಧನ ಖಾತೆಯನ್ನು ನೀಡಬಾರದು ಎಂದು ಡಿ.ಕೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಗೃಹ ಖಾತೆ ಜೊತೆಗೆ 21 ಸಚಿವ ಸ್ಥಾನಗಳನ್ನು ಕಾಂಗ್ರೆಸ್ ಗೆ ನೀಡಲಾಗಿದ್ದು, ಜೆಡಿಎಸ್ ಗೆ 11 ಸಚಿವ ಸ್ಥಾನಗಳನ್ನು ನೀಡಲಾಗಿದೆ. ಕಡಿಮೆ ಸ್ಥಾನಗಳನ್ನು ಜೆಡಿಎಸ್ ಗೆ ನೀಡಿರುವುದರಿಂದ ಪ್ರಮುಖ ಖಾತೆಗಳನ್ನು ನೀಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಪಟ್ಟು ಹಿಡಿದಿದ್ದು, ಗೃಹ, ಕೈಗಾರಿಕೆ, ಸಾರಿಗೆ, ಕೃಷಿ, ತೋಟಗಾರಿಕೆ, ಐ.ಟಿ.ಬಿಟಿ, ಅರಣ್ಯ, ಯುವಜನ ಕ್ರೀಡೆ, ವಸತಿ, ಪೌರಾಡಳಿತ, ನಗರಾಭಿವೃದ್ದಿ ಖಾತೆಗಳನ್ನ ಕಾಂಗ್ರೆಸ್ ಹಂಚಿಕೊಳ್ಳಲಿ ಎಂದು ದೇವೇಗೌಡರು ಸೂಚನೆ ನೀಡಿದ್ದಾರೆ.
ಆದರೆ ಈ ಕಾಂಗ್ರೆಸ್ ಮುಖಂಡರು ಮಾತ್ರ ಹೈ ಕಮಾಂಡ್ ಜೊತೆ ಚರ್ಚೆ ಮಾಡದೇ ಯಾವುದೇ ರೀತಿಯಾದ ನಿರ್ಧಾರವನ್ನೂ ಕೂಡ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Comments are closed.