ಕರ್ನಾಟಕ

ಅನೈತಿಕ ಚಟುವಟಿಕೆಗಳ ಕಡಿವಾಣಕ್ಕೆ ಕಬ್ಬನ್‌ಪಾರ್ಕ್‌ ವರೆಗೂ 100 ಸಿಸಿ ಕ್ಯಾಮರಾ, 700 ಸ್ಮಾರ್ಟ್‌ ಲೈಟ್‌

Pinterest LinkedIn Tumblr


ಬೆಂಗಳೂರು: ನಗರದ ಕಬ್ಬನ್‌ಪಾರ್ಕ್‌ಗೆ ಶೀಘ್ರದಲ್ಲೇ 100 ಸಿಸಿ ಕ್ಯಾಮರಾಗಳು ಮತ್ತು 700 ಸ್ಮಾರ್ಟ್‌ ಲೈಟ್‌ಗಳು ಬರಲಿವೆ. ನಸುಗತ್ತಲಲ್ಲಿ ಉದ್ಯಾನಕ್ಕೆ ಬರುವ ವಾಯುವಿಹಾರಿಗಳು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ರಕ್ಷಣೆ ಒದಗಿಸುವ ಸಲುವಾಗಿ ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ಬೆಸ್ಕಾಂ ಸಹಯೋಗದೊಂದಿಗೆ ಲೈಟ್‌ಗಳು ಮತ್ತು ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಉದ್ಯಾನಕ್ಕೆ ಏಳು ಪ್ರವೇಶ ದ್ವಾರಗಳಿಂದ ನಿತ್ಯ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇಲ್ಲಿ ಮರ-ಗಿಡಗಳ ಸಂಖ್ಯೆಯೂ ಯಥೇಚ್ಛವಾಗಿದೆ. ಇದರಿಂದ ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ಆಗಾಗ್ಗೆ ಸರಗಳ್ಳತನ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಯುವತಿಯರನ್ನು ಚುಡಾಯಿಸುವುದು ಇತ್ಯಾದಿ ಘಟನೆಗಳು ನಡೆಯುತ್ತಿದ್ದವು. ಹೀಗಾಗಿ ಉದ್ಯಾನದಾದ್ಯಂತ ಆಯ್ದ ಭಾಗಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

‘‘ಕಬ್ಬನ್‌ಪಾರ್ಕ್‌ನಲ್ಲಿರುವ ಲೈಟ್‌ಗಳು ಸಾಕಷ್ಟು ಹಳೆಯದಾಗಿವೆ. ಇವು ಮಬ್ಬಾಗಿ ಉರಿಯುತ್ತವೆ. ಹೀಗಾಗಿ ಉದ್ಯಾನಕ್ಕೆ ಬೆಳಗ್ಗಿನ ಜಾವ ಮತ್ತು ಸಂಜೆಯ ನಸುಗತ್ತಲಲ್ಲಿ ಭೇಟಿ ನೀಡುವ ಮಂದಿಗೆ ಸುರಕ್ಷತೆ ಒದಗಿಸಬೇಕಾಗಿದೆ. ಹೀಗಾಗಿ ಬೆಸ್ಕಾಂ ಸಹಯೋಗದೊಂದಿಗೆ 700 ಸ್ಮಾರ್ಟ್‌ ಲೈಟ್‌ಗಳನ್ನು ಅಳವಡಿಸಲಾಗುವುದು. ಸಿಸಿ ಕ್ಯಾಮರಾ ಮತ್ತು ಲೈಟ್‌ಗಳ ಅಳವಡಿಕೆ ಕಾರ್ಯದ ಟೆಂಡರ್‌ ಮುಗಿದಿದ್ದು, ಶೀಘ್ರದಲ್ಲೇ ಅಳವಡಿಸಲಾಗುವುದು,’’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ್‌ ಮುರಗೋಡ್‌ ತಿಳಿಸಿದರು.

ಅನೈತಿಕ ಚಟುವಟಿಕೆಗಳಿಗೆ ಬ್ರೇಕ್‌

ಕಬ್ಬನ್‌ಪಾರ್ಕ್‌ಗೆ ಪ್ರವೇಶ ಶುಲ್ಕವಿಲ್ಲ ಎಂಬ ಕಾರಣದಿಂದಾಗಿ ರಾಜ್ಯದ ನಾನಾ ಭಾಗಳಿಂದ ಪ್ರೇಮಿಗಳನ್ನು ಒಳಗೊಂಡಂತೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದರಲ್ಲೂ ಇಲ್ಲಿ ಪೊದೆಗಳು, ಕಲ್ಲು ಬಂಡೆಗಳು, ಬಿದಿರು ಪೊದೆಗಳು ಹೆಚ್ಚಾಗಿರುವುದರಿಂದ ಪ್ರೇಮಿಗಳು ಏಕಾಂತದಲ್ಲಿ ವಿಹರಿಸುತ್ತಾರೆ. ಜತೆಗೆ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಇದರಿಂದ ಈ ಭಾಗಗಳಲ್ಲಿ ಸಂಚರಿಸುವ ಸಭ್ಯರಿಗೆ ಸಂಚರಿಸಲು ತುಂಬಾ ಮುಜುಗರವಾಗುತ್ತಿತ್ತು. ಸಿಸಿ ಕ್ಯಾಮರಾಗಳು ಬಂದರೆ ಅನೈತಿಕ ಚಟುವಟಿಕೆಗಳಿಗೆ ಬ್ರೇಕ್‌ ಬೀಳಬಹುದು ಎಂಬುದು ಸಮಾಧಾನದ ಸಂಗತಿ.

ಉದ್ಯಾನದಲ್ಲಿ ನಡೆದಿತ್ತು ಅತ್ಯಾಚಾರ

ಉದ್ಯಾನದಲ್ಲಿ 2015ರಲ್ಲಿ ಸುಮಾರು 34 ವರ್ಷದ ಅವಿವಾಹಿತ ಮಹಿಳೆಯ ಮೇಲೆ ಅಲ್ಲಿನ ಭದ್ರತಾ ಸಿಬ್ಬಂದಿಯೇ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣ ಸಾಕಷ್ಟು ಟೀಕೆಗೊಳಗಾಗಿತ್ತು. ಭದ್ರತಾ ವೈಫಲ್ಯಕುರಿತು ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಉದ್ಯಾನದಲ್ಲಿ ಸಿಸಿ ಕ್ಯಾಮರಾಗಳು ಅಳವಡಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು

ಹಲವು ಅಭಿವೃದ್ಧಿ ಕಾರ್ಯ

ಉದ್ಯಾನದಲ್ಲಿ ಪ್ರತಿ ಭಾನುವಾರ ಮತ್ತು ಎರಡನೇ ಶನಿವಾರಗಳಂದು ಸಾರ್ವಜನಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ಕಬ್ಬನ್‌ಪಾರ್ಕ್‌ನಲ್ಲಿ ಇದೀಗ ವಾಯುಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಇದರ ಜತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದೀಗ ಸಿಸಿ ಕ್ಯಾಮರಾ ಮತ್ತು ಸ್ಮಾರ್ಟ್‌ ಲೈಟ್‌ಗಳಿಂದ ಉದ್ಯಾನಕ್ಕೆ ಮತ್ತಷ್ಟು ಕಳೆ ಬರಲಿದೆ.

Comments are closed.