ರಾಷ್ಟ್ರೀಯ

ಹನುಮಾನ್‌ ಜೀ ಜಗತ್ತಿನ ಪ್ರಥಮ ಬುಡಕಟ್ಟು ಜನಾಂಗದ ವ್ಯಕ್ತಿ: ರಾಜಸ್ಥಾನದ ಬಿಜೆಪಿ ಎಂಎಲ್‌ಎ ಗ್ಯಾನ್ ದೇವ್ ಅಹುಜಾ

Pinterest LinkedIn Tumblr


ಜೈಪುರ: ಹನುಮಂತ ವಿಶ್ವದ ಮೊದಲ ಬುಡಕಟ್ಟು ಜನಾಂಗದ ವ್ಯಕ್ತಿ ಎಂದು ರಾಜಸ್ಥಾನದ ಬಿಜೆಪಿ ಎಂಎಲ್‌ಎ ಗ್ಯಾನ್ ದೇವ್ ಅಹುಜಾ ಹೇಳಿಕೊಂಡಿದ್ದಾರೆ. ಹನುಮಾನ್‌ ಜೀ ಆದಿವಾಸಿಗಳ ಸೇನೆಯನ್ನು ರಚಿಸಿದ್ದರು. ಅಲ್ಲದೆ, ಇವರಿಗೆಲ್ಲ ರಾಮ ತರಬೇತಿ ನೀಡಿದ್ದರು. ಹೀಗಾಗಿ, ಹನುಮಂತನನ್ನು ದೇಶದ ಬುಡಕಟ್ಟು ಜನತೆ ಅತೀವವಾಗಿ ಪೂಜಿಸುತ್ತಾರೆ ಎಂದು ಅಹುಜಾ ನಂಬಿದ್ದಾರೆ. ಆದರೆ, ಏಪ್ರಿಲ್ 2 ರಂದು ನಡೆದ ಭಾರತ್ ಬಂದ್ ಪ್ರತಿಭಟನೆ ವೇಳೆ ಹನುಮಂತನ ಫೋಟೋಗೆ ಅವಮಾನ ಮಾಡಲಾಗಿದೆ ಎಂದು ಶಾಸಕ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು, ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಬುಡಕಟ್ಟು ಜನಾಂಗದ ವ್ಯಕ್ತಿಯಾಗಿ, ಹನುಮಂತನ ವಿರುದ್ಧ ಅಗೌರವ ತೋರಿದ್ದಾರೆ. ಹೀಗಾಗಿ, ತಾನು ಅವರ ಜತೆ ಮಾತನಾಡಿದ್ದೇನೆ ಎಂದು ಪಕ್ಷದ ಕಚೇರಿಯಲ್ಲಿ ಮಾಧ್ಯಮಕ್ಕೆ ಅಹುಜಾ ಹೇಳಿಕೆ ನೀಡಿದ್ದಾರೆ. ಬುಡಕಟ್ಟು ಜನಾಂಗದ ಮೊದಲ ದೇವರು ಹಾಗೂ ಹಿಂದೂವಿನ ದೇವರು ಹನುಮಾನ್ ಜೀ. ಆದರೂ, ಬಿಜೆಪಿ ಸಂಸದ ಯಾಕೆ ಅಗೌರವ ತೋರಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದು ದುರದೃಷ್ಟಕರ ಎಂದು ರಾಜಸ್ಥಾನ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಮಾಹಿತಿ ನೀಡಿದ್ದಾರೆ.

ಅಹುಜಾ ಈ ಹಿಂದೆಯೂ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಜವಾಹರಲಾಲ್ ನೆಹರೂ ವಿವಿ ಕ್ಯಾಂಪಸ್‌ನಲ್ಲಿ ಪ್ರತಿದಿನ 3 ಸಾವಿರ ಕಾಂಡೋಮ್‌ಗಳು ಹಾಗೂ 2 ಸಾವಿರ ಮದ್ಯದ ಬಾಟಲಿಗಳು ಸಿಗುತ್ತವೆ ಎಂದು ಫೆಬ್ರವರಿ 2016ರಲ್ಲಿ ಆರೋಪಿಸಿದ್ದರು. ಅಲ್ಲದೆ, ಗೋ ಹತ್ಯೆ ಹಾಗೂ ಕಳ್ಳ ಸಾಗಣೆ ಮಾಡುವವರನ್ನು ಅದೇ ರೀತಿ ಹತ್ಯೆ ಮಾಡಬಹುದು ಎಂದು ರಾಜಸ್ಥಾನ ಬಿಜೆಪಿ ಶಾಸಕ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು.

Comments are closed.