ಪುಣೆ: ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ಪ್ರಚಾರಕ್ಕಾಗಿ ಗಣ್ಯ ವ್ಯಕ್ತಿಗಳನ್ನು ಕತೆರುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದಲ್ಲೊಬ್ಬ ವ್ಯಕ್ತಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಪರ ಪ್ರಚಾರ ಮಾಡುತ್ತಾರೆ ಎಂದು ಪ್ರಚಾರ ಗಿಟ್ಟಿಸಿ ಜನರನ್ನು ಬಕರಾ ಮಾಡಿದ್ದಾನೆ.
ಮಹರಾಷ್ಟ್ರದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದೆ. ಪುಣೆ ಜಿಲ್ಲೆಯ ಶಿರೂರ್ನಲ್ಲಿರುವ ರಾಮಲಿಂಗಾ ಗ್ರಾಮ ಪಂಚಾಯತಿಯ ಸರಪಂಚ ಹುದ್ದೆಗೆ ವಿಟ್ಟಲ್ ಗಣಪತ್ ಘಾವಟೆ ಎಂಬ ವ್ಯಕ್ತಿ ಸ್ಪರ್ಧಿಸಿದ್ದಾರೆ. ಇವರು ತಮ್ಮ ಪರವಾಗಿ ವಿರಾಟ್ ಕೊಹ್ಲಿ ಪ್ರಚಾರ ಮಾಡುತ್ತಾರೆ ಎಂದು ಊರಲ್ಲೆಲ್ಲಾ ಬ್ಯಾನರ್ ಹಾಕಿಸಿ ಭರ್ಜರಿ ಪ್ರಚಾರ ಪಡೆದಿದ್ದಾರೆ.
ಫೆಬ್ರವರಿ 25 ರಂದು ಘಾವಟೆ ಪ್ರಚಾರ ಕಾರ್ಯಕ್ರಮ ಆಯೋಜಿಸಿದ್ದರು. ತಮ್ಮ ನೆಚ್ಚಿನ ಕ್ರೀಡಾಪಟುವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸಭೆಗೆ ಆಗಮಿಸಿದ್ದರು. ಆದರೆ ಅಲ್ಲಿ ನಡೆದದ್ದೇ ಬೇರೆ, ಘಾವಟೆ ಅವರು ವಿರಾಟ್ ಕೊಹ್ಲಿ ಬದಲು ಅವರನ್ನೇ ಹೋಲುವ ಜೂನಿಯರ್ ಕೊಹ್ಲಿಯನ್ನು ಕರೆತಂದು ವೇದಿಕೆಯ ಮೇಲೆ ನಿಲ್ಲಿಸಿದ್ದಾರೆ.
ನಿಜವಾದ ಕೊಹ್ಲಿಯನ್ನು ನೋಡಲು ಸೇರಿದ್ದ ಜನರು ಜೂನಿಯರ್ ಕೊಹ್ಲಿಯನ್ನು ನೋಡಿ ದಂಗಾಗಿದ್ದಾರೆ. ಜೂನಿಯರ್ ಕೊಹ್ಲಿ ಪ್ರಚಾರ ನಡೆಸಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಪ್ರಚಾರ ಪಡೆಯಲು ಯಾವೆಲ್ಲಾ ಗಿಮಿಕ್ ಮಾಡುತ್ತಾರೆ ಎಂಬುದರ ಕುರಿತು ರಸವತ್ತಾದ ಚರ್ಚೆ ನಡೆಯುತ್ತಿದೆ.
Comments are closed.