ಕರಾವಳಿ

ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ : ಕೈಕೊಟ್ಟ ವಿದ್ಯುತ್, ಇಂಟರ್‌ನೆಟ್, ಕೇಬಲ್ ನೆಟ್‌ವರ್ಕ್

Pinterest LinkedIn Tumblr

ಮಂಗಳೂರು, ಮೇ.28 : ಮುಂಗಾರು ಆರಂಭಕ್ಕೆ ‌ಮುಂಚೆಯೇ ಮಂಗಳೂರಲ್ಲಿ ‌ಮಳೆಯ ಆರ್ಭಟ ಜೋರಾಗಿದ್ದು, ಕಳೆದ ಒಂದು ವಾರದಿಂದ ಸಂಜೆ ವೇಳೆ ಸತತವಾಗಿ ಮಳೆ ಸುರಿಯುತ್ತಿದೆ.

ರವಿವಾರ ಸಂಜೆ ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಗೆ ನಗರದ ಜನತೆ ತತ್ತರಿಸಿದ್ದರೆ. ಒಂದೆಡೆ ವಿದ್ಯುತ್ ಕೈಕೊಟ್ಟರೆ ಇನ್ನೊಂದೆಡೆ ಸಿಡಿಲಿನ ಅರ್ಭಟಕ್ಕೆ ಟಿ.ವಿ ಕೆಬಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್‌ ಗಳು ಹಾನಿಗೊಂಡ ಹಿನ್ನೆಲೆಯಲ್ಲಿ ರವಿವಾರ ರಾತ್ರಿ ಹಾಗೂ ಸೋಮವಾರ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.

ಇನ್ನೂ ಕೆಲವೇ ದಿನಗಳಲ್ಲಿ ಕರಾವಳಿಗೆ ಮುಂಗಾರು ಪ್ರವೇಶಿಸಲಿರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆದ್ರೆ ಮಂಗಳೂರಿನಲ್ಲಿ ಮುಂಗಾರು ಆರಂಭಕ್ಕೆ ಮುಂಚೆಯೇ ಬಿರುಸಿನ ಮಳೆಯಾಗುತ್ತಿದೆ. ಮೆಕುನು‌ ಚಂಡಮಾರುತ ಪ್ರಭಾವದ ಹಿನ್ನೆಲೆಯಲ್ಲಿ ಕರಾವಳಿಯ ವಿವಿಧ ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನಗರದ ಹೊರವಲಯಗಳಲ್ಲಿ ಭಾರೀ ಹಾನಿ ಸಂಭವಿಸಿದೆ.

ಬ್ರಿಟಿಷರ ಕಾಲದ ಹೊಸ್ಮಠ ಸೇತುವೆಯ ಬಳಿ ರಸ್ತೆ ಕುಸಿತ:

ಉಪ್ಪಿನಂಗಡಿ-ಕಡಬ ನಡುವಿನ ಸಂಪರ್ಕ ಕೊಂಡಿ ಹೊಸ್ಮಠ ಸೇತುವೆಯ ಬಳಿ ರಸ್ತೆ ಕುಸಿತ ಸಂಭವಿಸಿದೆ. ಭಾರೀ ಮಳೆಯ ಪರಿಣಾಮ ರಸ್ತೆ ಕುಸಿದಿದ್ದು, ಇದರಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಪ್ರತೀ ಮಳೆಗಾಲದಲ್ಲಿ ಮುಳುಗಡೆ ಸೇತುವೆ ಎಂದೇ ಪ್ರಚಲಿತದಲ್ಲಿರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಹೊಸ್ಮಠ ಹಳೆ ಸೇತುವೆ ಬಳಿ ಈ ಕುಸಿತ ಸಂಭವಿಸಿದೆ. ಮುಳುಗು ಸೇತುವೆಗೆ ಪರ್ಯಾಯವಾಗಿ ಅದರ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆ ಸೇತುವೆಯ ಬದಿಯಿಂದ ನೀರನ್ನು ಹೊರಹರಿಯಲು ಬಿಡಲಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಇಂದು ಮುಂಜಾನೆ ಸೇತುವೆ ಬಳಿ ರಸ್ತೆ ಕುಸಿದಿದೆ.

ಕೂಡಲೇ ಪರಿಹಾರ ಕಾರ್ಯಾಚರಣೆ ಕೈಗೊಲ್ಳಲಾಗಿದ್ದು, ನೂತನ ಸೇತುವೆಯ ಗುತ್ತಿಗೆದಾರರು ಕುಸಿದ ಭಾಗಕ್ಕೆ ಹಿಟಾಚಿ ಮೂಲಕ ಕಲ್ಲುಗಳನ್ನು ಹಾಸಿ ಸುಗಮಕ್ಕೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಂಗಳೂರಿನ ಕೇಂದ್ರ ಮೈದಾನದಲ್ಲಿ ಐಪಿಎಲ್ ವೀಕ್ಷಣೆಗೆ ಅಡ್ಡಿ :

ಬಾನುವಾರ ಸಂಜೆ ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಗೆ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಐಪಿಎಲ್ ಕ್ರಿಕೆಟ್ ಮ್ಯಾಚ್ ವೀಕ್ಷಣೆಗೆ ಅಡಚಣೆಯಾಗಿದೆ.

ರವಿವಾರ ಐಪಿಎಲ್ ಕ್ರಿಕೆಟ್ ಮ್ಯಾಚ್‌ನ ಫೈನಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ನಗರ ನೆಹರೂ ಮೈದಾನದಲ್ಲಿ ಎಲ್‌ಇಡಿ ಪರದೆ ಮೂಲಕ ಸಾರ್ವಜನಿಕರಿಗೆ ಮ್ಯಾಚ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸಂಜೆ ಸುಮಾರು 6 ಗಂಟೆಯ ಬಳಿಕ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿತ್ತು. ಮಳೆಯಿಂದಾಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಅಡಚಣೆಯಾಗಿತ್ತು.

Comments are closed.