ಕರಾವಳಿ

ಜಿಲ್ಲಾದ್ಯಂತ ಇಂದು ಸಡಗರದ ಶಾಲಾ ಪ್ರಾರಂಭೋತ್ಸವ ; ಹೊಸ ಶೈಕ್ಷಣಿಕ ವರ್ಷದ ಆರಂಭೋತ್ಸವ

Pinterest LinkedIn Tumblr

ಮಂಗಳೂರು, ಮೇ 28: ಜಿಲ್ಲಾದ್ಯಂತ ಇಂದು ಶಾಲಾ ಪ್ರಾರಂಭೋತ್ಸವವು ಬಹಳ ಸಂಭ್ರಮದಿಂದ ನೆರವೇರಿತು.

ಶಾಲಾ ಪ್ರಾರಂಭೋತ್ಸವಪ್ರಯುಕ್ತ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ಶಾಲೆಗಳನ್ನು ಶೃಂಗಾರಗೊಳಿಸಲಾಗಿತ್ತು. ಹೊಸ ಬಟ್ಟೆ , ಹೊಸ ಬ್ಯಾಗ್, ಹೊಸ ತರಗತಿಗಳಿಗೆ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ನವ ಉಲ್ಲಾಸದಿಂದ ಬಂದರು. ಶಾಲೆಯ ಪ್ರತಿಯೊಂದು ತರಗತಿಗಳು ಶೃಂಗಾರಗೊಂಡು ವಿದ್ಯಾರ್ಥಿಗಳನ್ನು ಆಕರ್ಷಿಸುತಿತ್ತು.

ಶಿಕ್ಷಕರು ನಗು ಮೊಗದಿಂದ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ನಂತರ ಶಾಲಾಸಭಾಭವನದಲ್ಲಿ ಹೊಸ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ನಗರದ ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಇಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭೋತ್ಸವವು ಬಹಳ ಸಂಭ್ರಮದಿಂದ ನೆರವೇರಿತು.

ದೀಪ ಬೆಳಗಿಸುವುದರೊಂದಿಗೆ ಶಾಲಾ ಹೊಸ ಶೈಕ್ಷಣಿಕ ವರ್ಷದ ಉದ್ಘಾಟನೆಯನ್ನು ಮಾಡಿದ ಶಾಲಾ ಸಂಚಾಲಕರಾದ ವಂದನೀಯ ಫಾ! ಎರಿಕ್ ಮಥಾಯಸ್ ಅವರು, ಈ ವರ್ಷ ಸಂತ ಅಲೋಶಿಯಸ್ ಗೊನ್ಜಾಗ ರವರ 450ನೇ ಹುಟ್ಟು ಹಬ್ಬದ ಸಂಭ್ರಮದ ವರ್ಷವಾಗಿದ್ದು ಅವರ ಆದರ್ಶಗಳಂತೆ ನಡೆಯಲು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ದೇಶದ ಉತ್ತಮ ನಾಗರಿಕರಾಗಬೇಕೆಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಸರ್ವ ಧರ್ಮದ ಪ್ರಾರ್ಥನೆಯಲ್ಲಿ ವಿದ್ಯಾರ್ಥಿಗಳಿಗಾಗಿ, ಶಿಕ್ಷಕರಿಗಾಗಿ, ಪೋಷಕರಿಗೆ ಹಾಗೂ ವಿದ್ಯಾಸಂಸ್ಥೆಗಾಗಿ ವಿಶೇಷವಾದ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಶಾಲಾ ಸಂಚಾಲಕರಾದ ವಂದನೀಯ ಫಾ! ಎರಿಕ್ ಮಥಾಯಸ್ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫಿಲೋಮಿನಾ ಲೂವಿಸ್ ಉಪಮುಖ್ಯೋಪಾಧ್ಯಾಯರಾದ ಶ್ರೀ ಲಿಯಾ ಡಿ’ಸೋಜ ಶಾಲಾ ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ರೇಖಾ ಫ಼ೆರ್ನಾಂಡಿಸ್ ರವರು ವೇದಿಕೆಯಲ್ಲಿ ಹಾಜರಿದ್ದರು. ಆರಂಭೋತ್ಸವ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಹಾಜರಿದ್ದರು.

ಶಿಕ್ಷಕಿಯರಾದ ಶ್ರೀಮತಿ ಜೊಸಿಟಾ ನೊರೊನ್ಹಾ ಹಾಗೂ ಶ್ರೀಮತಿ ಬ್ಲಾಂಚ್ ಡಿ’ಅಲ್ಮೇಡ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Comments are closed.