ರಾಷ್ಟ್ರೀಯ

ಶ್ರೀಮಂತ ಯುವತಿಯನ್ನು ಪ್ರೇಮ ವಿವಾಹವಾದ ಬಡ ಕುಟುಂಬದ ಯುವಕನ ಮರ್ಯಾದೆಗೇಡು ಹತ್ಯೆ

Pinterest LinkedIn Tumblr


ಕೊಟ್ಟಾಯಂ: ನವವಿವಾಹಿತನೊಬ್ಬನನ್ನು ಪತ್ನಿಯ ಸೋದರ ಅಪಹರಿಸಿ ಕೊಲೆ ಮಾಡಿದ್ದು, ಇದು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ.

ಕೊಟ್ಟಾಯಂ ನಿವಾಸಿಯಾಗಿರುವ 23 ವರ್ಷದ ಕೆವಿನ್‌ ಪಿ. ಜೋಸೆಫ್‌ನ ಶವ ಕೊಲ್ಲಂ ಜಿಲ್ಲೆಯ ಕೊಳವೊಂದರಲ್ಲಿ ಸೋಮವಾರ ಮುಂಜಾನೆ ಪತ್ತೆಯಾಗಿದ್ದು, ಆತನ ಸಂಬಂಧಿಕರು ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಿದ್ದಾರೆ. ತುರ್ತು ಕ್ರಮ ಕೈಗೊಳ್ಳದ ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆವಿನ್‌ ಜೋಸೆಫ್‌ ಕೊಟ್ಟಾಯಂನ ಕಾಲೇಜಿನಲ್ಲಿ ಕಲಿಯುತ್ತಿದ್ದ ನೀನು ಎಂಬ ಯುವತಿಯನ್ನು ಪ್ರೀತಿಸಿದ್ದು, ಕೆಲವು ದಿನಗಳ ಹಿಂದೆ ಮನೆಯವರ ವಿರೋಧವನ್ನು ಲೆಕ್ಕಿಸದೆ ಎಟ್ಟು ಮನೂರ್‌ನ ನೋಂದಣಿ ಕೇಂದ್ರದಲ್ಲಿ ಮದುವೆಯಾಗಿದ್ದರು.

ಯುವತಿ ಕೊಲ್ಲಂನ ಶ್ರೀಮಂತ ಮನೆತನಕ್ಕೆ ಸೇರಿದ್ದು, ಕೆವಿನ್‌ ಕುಮಾರನಲ್ಲೋರಿನ ಬಡ ಕುಟುಂಬದವನು. ಈ ಹಿಂದೆಯೇ ಇವರ ಮದುವೆಗೆ ವಿರೋಧ ವ್ಯಕ್ತವಾಗಿದ್ದು, ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು. ಆಗ ಯುವತಿ ತಾನು ಕೆವಿನ್‌ನನ್ನೇ ಮದುವೆಯಾಗುವುದಾಗಿ ದೃಢವಾಗಿ ಹೇಳಿದ್ದರು.

ಭಾನುವಾರ ಬೆಳಗ್ಗೆ ಕೆವಿನ್‌ನ ಮನೆಗೆ ನುಗ್ಗಿದ ನೀನು ಅವರ ಸೋದರ ಮತ್ತು ತಂಡ ಗಂಭೀರ ಹಲ್ಲೆ ನಡೆಸಿ ಆತನನ್ನು ಮತ್ತು ಸೋದರ ಅನೀಶ್‌ನ್ನು ಅಪಹರಿಸಿತ್ತು. ಅನೀಶ್‌ನನ್ನು ರಸ್ತೆಯಲ್ಲಿ ಎಸೆದು ಹೋದರೆ, ಕೆವಿನ್‌ ಭಾರಿ ಹುಡುಕಾಟದ ಬಳಿಕ ಶವವಾಗಿ ಸಿಕ್ಕಿದ್ದ. ಇದು ಮರ್ಯಾದೆಗೇಡು ಹತ್ಯೆ ಎಂದು ಸಂಶಯಿಸಿರುವ ಕೇರಳ ಮಾನವ ಹಕ್ಕುಗಳ ಆಯೋಗ ಮೂರು ವಾರಗಳ ಒಳಗೆ ವರದಿ ನೀಡುವಂತೆ ಸೂಚಿಸಿದೆ.

ಪೊಲೀಸರು 10 ಮಂದಿ ಅಪರಿಚಿತರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ತನಿಖೆ ಮತ್ತು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸುವಂತೆ ಡಿಜಿಪಿಗೆ ಆದೇಶ ನೀಡಿದ್ದಾರೆ. ಕೊಲ್ಲಂ ಮತ್ತು ಕೊಟ್ಟಾಯಂನಲ್ಲಿ ತಲಾ ಒಂದು ತಂಡವನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ವಿಜಯನ್‌ ಆಶಾವಾದ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಅಮಾನತು

ಕರ್ತವ್ಯ ನಿರ್ಲಕ್ಷ್ಯದ ಆರೋಪಗಳು ಜೋರಾಗಿ ಕೇಳಿಬರುತ್ತಿದ್ದಂತೆಯೇ ಗಾಂಧಿ ನಗರ ಪೊಲೀಸ್‌ ಠಾಣೆಯ ಎಸ್‌ಐ ಎಂ.ಎಸ್‌. ಶಿಬು ಮತ್ತು ಎಎಸ್‌ಐ ಸನ್ನಿ ಮೋನ್‌ ಅವರನ್ನು ಐಜಿ ವಿಜಯ ಸಹ್ಕಾರೆ ಅಮಾನತುಗೊಳಿಸಿದ್ದಾರೆ.

ರಾಜಕೀಯ ಪ್ರವೇಶ

ವಿರೋಧ ಪಕ್ಷವಾದ ಯುಡಿಎಫ್‌ ನಾಯಕ ರಮೇಶ್‌ ಚೆನ್ನಿತ್ತಲ ಅವರು ಗೃಹ ಖಾತೆಯನ್ನೂ ಹೊಂದಿರುವ ಸಿಎಂ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಸಚಿವ ಹುದ್ದೆ ತೊರೆಯುವಂತೆ ಆಗ್ರಹಿಸಿದ್ದಾರೆ. ಬಿಜೆಪಿ ಕೊಟ್ಟಾಯಂ ಜಿಲ್ಲೆಯಲ್ಲಿ ಮಂಗಳವಾರ ಹರತಾಳಕ್ಕೆ ಕರೆ ನೀಡಿದೆ.

ಡಿವೈಎಫ್‌ಐ ಕಾರ‍್ಯಕರ್ತರು?

ಕೊಲೆ ಮಾಡಿದವರು ಸಿಪಿಎಂನ ಯುವ ಸಂಘಟನೆಯಾದ ಡಿವೈಎಫ್‌ಐ ಕಾರ್ಯಕರ್ತರು ಎಂದು ವಿರೋಧ ಪಕ್ಷಗಳು ಆಪಾದಿಸಿವೆ. ಆದರೆ, ಡಿವೈಎಫ್‌ಐ ಇದನ್ನು ನಿರಾಕರಿಸಿದೆ. ಈ ನಡುವೆ, ತಂಡದಲ್ಲಿದ್ದರೆಂದು ಹೇಳಲಾದ ಇಬ್ಬರನ್ನು ಸಂಘಟನೆಯ ಪ್ರಾಥಮಿಕ ಸದಸ್ಯತ್ವದಿಂದ ಡಿವೈಎಫ್‌ಐ ವಜಾ ಮಾಡಿದೆ.

Comments are closed.