ರಾಷ್ಟ್ರೀಯ

ಮುದ್ರಾ ಯೋಜನೆಯಡಿ ಕಿರು ಉದ್ದಿಮೆ, ಸಣ್ಣ ವ್ಯಾಪಾರ ಆರಂಭಿಸುವವರಿಗೆ 6 ಲಕ್ಷ ಕೋಟಿ ಸಾಲ ವಿತರಣೆ

Pinterest LinkedIn Tumblr


ಹೊಸದಿಲ್ಲಿ: ಮುದ್ರಾ ಯೋಜನೆಯಡಿಯಲ್ಲಿ ಕಿರು ಉದ್ದಿಮೆ, ಸಣ್ಣ ವ್ಯಾಪಾರ ಆರಂಭಿಸುವವರಿಗೆ ಒಟ್ಟು 6 ಲಕ್ಷ ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ ಹಾಗೂ ಇದರಿಂದ 12 ಕೋಟಿ ಮಂದಿಗೆ ಪ್ರಯೋಜನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ತಿಳಿಸಿದ್ದಾರೆ.

ಈ ಹಿಂದಿನ ಸರಕಾರಗಳು ಸಾಲ ಮೇಳ ಮಾದರಿಯಲ್ಲಿ ಸಾಲ ವಿತರಿಸಿದ್ದರೂ ಅದು ಪರಿಣಾಮಕಾರಿಯಾಗಿರಲಿಲ್ಲ. ಆದರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಿಂದ (ಪಿಎಂಎಂವೈ) ಜನತೆಗೆ ಸ್ವ ಉದ್ಯೋಗ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಮೋದಿಯವರು ಹೇಳಿದರು.

2015ರ ಏಪ್ರಿಲ್‌ 8ರಂದು ಮುದ್ರಾ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಯೋಜನೆಯಡಿಯಲ್ಲಿ ಸಣ್ಣ ವ್ಯಾಪಾರ, ಉದ್ದಿಮೆ ಆರಂಭಿಸಲು 10 ಲಕ್ಷ ರೂ. ತನಕ ಸಾಲ ನೀಡಲಾಗುತ್ತದೆ. ಕಳೆದ ವರ್ಷ ಕೇಂದ್ರ ಸರಕಾರ 2.53 ಲಕ್ಷ ಕೋಟಿ ರೂ. ಸಾಲವನ್ನು ಮುದ್ರಾ ಅಡಿ ವಿತರಿಸಿತ್ತು. ಕಳೆದ 3 ವರ್ಷಗಳಲ್ಲಿ 5.73 ಲಕ್ಷ ಕೋಟಿ ರೂ. ಸಾಲ ವಿತರಿಸಲಾಗಿದೆ.

ಮುದ್ರಾ ಫಲಾನುಭವಿಗಳ ಜತೆಗೆ ವಿಡಿಯೊ ಕಾನ್ಫರೆನ್ಸ್‌ ನಡೆಸಿದ ಪ್ರಧಾನಿ ಮೋದಿ, 25-30 ವರ್ಷಗಳ ಹಿಂದೆ ರಾಜಕೀಯ ಲಾಭಕ್ಕೋಸ್ಕರ ಸಾಲ ಮೇಳಗಳನ್ನು ಆಯೋಜಿಸಲಾಗುತ್ತಿತ್ತು. ರಾಜಕಾರಣಿಗಳಿಗೆ ಆಪ್ತರಾದವರು, ಸಂಬಂಧಿಕರು ಸಾಲ ಪಡೆದು, ಅದನ್ನು ಹಿಂತಿರುಗಿಸುವ ಗೊಡವೆಗೇ ಹೋಗುತ್ತಿರಲಿಲ್ಲ. ಸಾಲ ಪಡೆದ ನಂತರ ಫಲಿತಾಂಶ ಏನಾಯಿತು ಎಂದು ಯಾರೂ ಗಮನಿಸುತ್ತಿರಲಿಲ್ಲ. ಎನ್‌ಡಿಎ ಸರಕಾರ ಇಂಥ ಸಾಲ ಮೇಳಗಳನ್ನು ಆಯೋಜಿಸಿಲ್ಲ. ಮಧ್ಯವರ್ತಿಗಳಿಗೆ ಅವಕಾಶ ನೀಡಿಲ್ಲ. ದೇಶದ ಯುವಜನತೆ ಮತ್ತು ಮಹಿಳೆಯರ ಮೇಲೆ ಸರಕಾರ ವಿಶ್ವಾಸವಿರಿಸಿದ್ದು, ಬ್ಯಾಂಕ್‌ಗಳಿಂದ ನೇರವಾಗಿ ಸಾಲ ಪಡೆದು ಸ್ವಂತ ಉದ್ಯೋಗ ಆರಂಭಿಸಬೇಕು ಎಂಬುದು ನಮ್ಮ ಸರಕಾರದ ಮುದ್ರಾ ಯೋಜನೆಯ ಆಶಯವಾಗಿದೆ ಎಂದರು.

Comments are closed.