ಕರಾವಳಿ

ಫೋಟೋ ಶೂಟ್‌‌ ಸಂದರ್ಭ ಜಲಪಾತಕ್ಕೆ ಬಿದ್ದ ಕನಸು ಚಿತ್ರದ ನಿರ್ದೇಶಕ ನೀರು ಪಾಲು

Pinterest LinkedIn Tumblr

ಮಂಗಳೂರು, ಮೇ 30 : ‘ಕನಸು ಕಣ್ಣು ತೆರೆದಾಗ’ ಕನ್ನಡ ಚಿತ್ರದ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಕಟೀಲ್ ಫೋಟೋ ಶೂಟ್‌‌ನಲ್ಲಿ ತೊಡಗಿದ್ದಾಗ ಎರ್ಮಾಯ್ ಫಾಲ್ಸ್‌ನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.

ಬೆಳ್ತಂಗಡಿಯ ಬಳಿಯ ಎರ್ಮಾಯ್ ಫಾಲ್ಸ್‌ನಲ್ಲಿ ಫೋಟೋ ಶೂಟ್‌ಗೆಂದು ಜಲಪಾತಕ್ಕೆ ಇಳಿದಿದ್ದ ಸಂದರ್ಭ ಸಂತೋಷ್ ಶೆಟ್ಟಿ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯಲ್ಲಿ ಬರುವ ದಟ್ಟಕಾಡಿನಲ್ಲಿರುವ ಎರ್ಮಾಯ್ ಫಾಲ್ಸ್‌ನಲ್ಲಿ ಸಂತೋಷ್ ಸಹಿತ ನಾಲ್ವರ ತಂಡ ಫೋಟೊ ಶೂಟ್ ನಡೆಸಲು ಬೆಳಗ್ಗೆ 8:30ಕ್ಕೆ ತೆರಳಿತ್ತು. ಸಂತೋಷ್ ಕಾಲಿಗೆ ಭಾರವಾದ ವಸ್ತುಕಟ್ಟಿಕೊಂಡು ಫೋಟೋ ಶೂಟ್‌‌ನಲ್ಲಿ ತೊಡಗಿದ್ದಾಗ ಕೆಳಗೆ ಬಿದ್ದು ಜಲ ಸಮಾಧಿಯಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ತಿಳಿಸಿದ್ದಾರೆ.

ಸಂತೋಷ್ ಕುಮಾರ್ 2015ರಲ್ಲಿ ಬಿಡುಗಡೆಯಾದ ಮಕ್ಕಳ ಚಲನ ಚಿತ್ರ ‘ಕನಸು’ ಚಿತ್ರವನ್ನು ನಿರ್ದೇಶಿಸಿದ್ದರು. ಮಂಗಳೂರಿನ ಪ್ರತಿಭೆಗಳೇ ಸೇರಿಕೊಂಡು `ಕನಸು` ಚಿತ್ರವನ್ನು ನಿರ್ಮಾಣ ಮಾಡಿದರು.

ಇದೀಗ ಹೊಸ ಚಿತ್ರದ ಪ್ರಚಾರಕ್ಕೆ ಪೂರ್ವಕವಾಗಿ, ನಿರ್ದೇಶಕ ಸಂತೋಷ ಸೇರಿದಂತೆ ನಾಲ್ವರು ಎರ್ಮಾಯ್ ಫಾಲ್ಸ್ ನಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವೇಳೆ ನೀರಿನ ರಭಸಕ್ಕೆ ಕಾಲು ಜಾರಿ ಬಿದ್ದು, ನೀರಿನಲ್ಲಿ ಜೀವಂತ ಸಮಾಧಿಯಾಗಿದ್ದಾರೆ.

ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ಎಲ್ಲೆಡೆ ಪ್ರವಾಹದ ಭೀತಿ ಎದುರಾಗಿದೆ. ಮಳೆಯಿಂದಾಗಿ ಜಲಪಾತಗಳು ಉಕ್ಕಿ ಹರಿಯುತ್ತಿದ್ದು, ಈ ಸಮಯದಲ್ಲಿ ಫಾಲ್ಸ್‌ನಲ್ಲಿ ಫೋಟೋ ಶೂಟ್ ಮಾಡುವ ವೇಳೆ ಕಾಲು ಜಾರಿ ಬಿದ್ದು, ನಿರ್ದೇಶಕ ಸಂತೋಷ್ ಸಾವನ್ನಪ್ಪುವ ಮೂಲಕ ಮಹಾಮಳೆಗೆ ಬಲಿಯಾಗಿದ್ದಾರೆ. ನಿರ್ದೇಶಕ ಸಂತೋಷ್ ನೀರಿನ ಸೆಳೆತಕ್ಕೆ ಜಲಪಾತಕ್ಕೆ ಬೀಳುತ್ತಿದ್ದಂತೆಯೇ ಜೊತೆಯಲ್ಲಿದ್ದ ಇನ್ನು ಮೂವರ ಮಂದಿ ಸಂತೋಷ್‌ನನ್ನು ರಕ್ಷಿಸಲು ನಡೆಸಿದ ಯತ್ನ, ವಿಫಲವಾಗಿದೆ.ಮಹಾ ಮಳೆ ಬಂದು ಜಲಪಾತಗಳಲ್ಲೆ ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ಫೋಟೋ ಶೂಟ್ ಮಾಡಲು ಜಲಪಾತಕ್ಕೆ ಇಳಿದಿದ್ದೇ ದುರ್ಘಟನೆ ಕಾರಣವಾಗಿದೆ.

Comments are closed.