ರಾಷ್ಟ್ರೀಯ

ನಿಫಾ ವೈರಸ್ ಕುರಿತು ಸುಳ್ಳು ಸುದ್ದಿ ಹರಡಿಸಿದ್ದಕ್ಕೆ ಒಬ್ಬನ ಬಂಧನ

Pinterest LinkedIn Tumblr


ತಿರುವನಂತಪುರ: ಫಾರಂ ಕೋಳಿಗಳಿಂದ ನಿಫಾ ವೈರಸ್‌ ಹರಡುತ್ತದೆ ಎಂದು ಸಾಮಾಜಿಕ ತಾಣ ಹಾಗೂ ವಾಟ್ಸ್‌ ಆಪ್‌ಗಳಲ್ಲಿ ಸುಳ್ಳು ಸಂದೇಶ ರವಾನೆ ಸಂಬಂಧ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಫಾರಂ ಕೋಳಿ ವಿತರಕರ ಸಂಘವು, ಸುಳ್ಳು ಮಾಹಿತಿ ಹಬ್ಬಿಸುತ್ತಿರುವ ಬಗ್ಗೆ ದೂರು ನೀಡಿದ್ದು, ಈ ಸಂಬಂಧ ಮೂವಾಟ್ಟುಪುಳದಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಓರ್ವನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿರುವುದಾಗಿ ತಿಳಿದು ಬಂದಿದೆ.

ಕಣ್ಣೂರಿನ ಮೂವಾಟ್ಟುಪುಳದಲ್ಲಿ ಕೋಳಿಗಳಿಂದ ನಿಫಾ ವೈರಸ್‌ ಹರಡುತ್ತಿರುವುದನ್ನು ಪುಣೆಯ ವೈರಾಲಜಿ ಸಂಸ್ಥೆ ನಿರ್ದೇಶಕ ಡಾ. ಆನಂದ ಬಸು ಅವರು ಖಚಿತಪಡಿಸಿದ್ದಾರೆ ಎಂಬ ವಾಟ್ಸ್‌ಆಪ್‌ ಸಂದೇಶವನ್ನು ರವಾನಿಸಿದ್ದಾರೆ. ಈ ಸಂಬಂಧ ಸುನಿಲ್‌ ಕುಮಾರ್‌(28) ಬಂಧಿಸಲಾಗಿದೆ. ಸುನಿಲ್‌ ಕುಮಾರ್‌ ತನೆಗೆ ಬಂದ ಸಂದೇಶಕ್ಕೆ ಸಂದೇಶ ರವಾನಿಸಿ, ಜೀವ ಉಳಿಸಿ ಎಂಬ ಟ್ಯಾಗ್‌ ಲೈನ್‌ ಸೇರಿಸಿ, ಇತರರಿಗೆ ಕಳುಹಿಸಿದ್ದಾನೆ. ಅಲ್ಲದೆ ಕೋಳಿ ಮಾಂಸ ತಿನ್ನದಂತೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿರುವುದಾಗಿ ಕಣ್ಣೂರು ನಗರ ಉಪ ಪೊಲೀಸ್ ಅಧೀಕ್ಷಕ ಶ್ರೀಜಿತ್‌ ಕೊಡೇರಿ ತಿಳಿಸಿದ್ದಾರೆ.

ನಕಲಿ ಸಂದೇಶ
ಮತ್ತೊಂದು ಪ್ರಕರಣದಲ್ಲಿ, ಫಾರಂ ಕೋಳಿಗಳಲ್ಲಿ ನಿಫಾ ವೈರಸ್‌ ಪತ್ತೆಯಾಗಿದ್ದು, ಪ್ರಯೋಗಾಲಯಗಳು ಈ ವಿಚಾರವನ್ನು ಅಧಿಕೃತಗೊಳಿಸಿದೆ. ಅಲ್ಲದೆ ಆರೋಗ್ಯ ಇಲಾಖೆಯೂ ಈ ಬಗ್ಗೆ ಎಚ್ಚರಿಕೆ ನೀಡಿರುವುದಾಗಿ ಸಂದೇಶ ಹರಿದಾಡಿತ್ತು. ಅಲ್ಲದೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ನಕಲಿ ಸೀಲ್‌ ಬಳಸಿ, ಎಚ್ಚರಿಕೆ ಸಂದೇಶಗಳನ್ನೂ ರವಾನಿಸಲಾಗಿದೆ. ಈ ಸಂಬಂಧ ಓರ್ವನನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳು ಬಳಿಕ ಬಿಡುಗಡೆ ಮಾಡಿದ್ದಾರೆ.

Comments are closed.