ರಾಷ್ಟ್ರೀಯ

ಜೂಜಿನಲ್ಲಿ ಪತ್ನಿಯ ಪಣ: ಸೋತ ಪತಿಯಿಂದ ಅತ್ಯಾಚಾರಕ್ಕೆ ಸಮ್ಮತಿ!

Pinterest LinkedIn Tumblr

0
ಬಾಲಸೋರ್‌ (ಒಡಿಶಾ): ಜೂಜಿನಲ್ಲಿ ಎಲ್ಲವನ್ನೂ ಸೋತ ಧರ್ಮರಾಯ ಕೊನೆಗೆ ಪತ್ನಿ ದ್ರೌಪದಿಯನ್ನೇ ಪಣಕ್ಕೆ ಇಟ್ಟಿದ್ದು ಮಹಾಭಾರತದ ಕತೆ. ಒಡಿಶಾದಲ್ಲೊಬ್ಬ ಮಹಾನುಭಾವ ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದ್ದಾನೆ. ಈ ಕತೆ ಇಲ್ಲಿಯೇ ನಿಲ್ಲುವುದಿಲ್ಲ. ಸೋತ ಗಂಡನ ಅನುಮತಿ ಪಡೆದು, ಗೆದ್ದ ಮಹಾಪುರುಷ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತೆ ಬಾಲಸೋರ್‌ ಸಮೀಪದ ಬಲಿಕುಟ್‌ ಗ್ರಾಮದ ನಿವಾಸಿ. ಆಕೆ ಎರಡು ಮಕ್ಕಳ ತಾಯಿ. ತಮ್ಮ ಮೇಲೆ ಮೇ 23ರಂದು ಅತ್ಯಾಚಾರ ನಡೆದಿದೆ ಎಂದು ಆಕೆ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ”ನಾನು ಪ್ರತಿಭಟಿಸಿದಾಗ ಪತಿ ನನ್ನ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಅತ್ಯಾಚಾರ ಎಸಗಲು ನೆರವಾಗಿದ್ದಾರೆ,” ಎಂದೂ ಸಂತ್ರಸ್ತೆ ಹೇಳಿಕೊಂಡಿದ್ದಾರೆ.

ಜೂಜಿನಲ್ಲಿ ಪತ್ನಿಯನ್ನು ಪಣಕ್ಕಿಟ್ಟಿದ್ದ!

ಸಂತ್ರಸ್ತ ಮಹಿಳೆಯ ಪತಿ ಜೂಜಿನಲ್ಲಿ ಪರಪುರುಷನಿಗೆ ಸೋತ ಕಾರಣ ಪತ್ನಿಯನ್ನು ಆತನಿಗೆ ಒಪ್ಪಿಸಿದ್ದ ಎಂದು ಹೇಳಲಾಗುತ್ತಿದೆ. ಆ ಕುರಿತು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಮನಸ್ಸು ಬದಲಿಸಿದ ಸಂತ್ರಸ್ತೆ : ಮೇ 28ರಂದು ಮಹಿಳೆ ತನ್ನ ಪತಿ ಹಾಗೂ ಕೆಲವು ಗ್ರಾಮಸ್ಥರೊಂದಿಗೆ ಪೊಲೀಸ್‌ ಠಾಣೆಗೆ ತೆರಳಿ ‘ಆರೋಪಿಯೊಂದಿಗೆ ನಾವು ರಾಜಿ ಮಾಡಿಕೊಂಡಿರುವುದಾಗಿಯೂ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವುದಿಲ್ಲವೆಂದೂ’ ಬರೆದುಕೊಟ್ಟಿದ್ದರು ಎಂಬುದಾಗಿ ಪೊಲೀಸ್‌ ಅಧಿಕಾರಿ ಹೇಳುತ್ತಾರೆ.

ಆದರೆ, ಮರು ದಿನ, ತನ್ನ ಮನಸ್ಸು ಬದಲಿಸಿದ ಆಕೆ, ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಲಿಖಿತ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Comments are closed.