ಕರ್ನಾಟಕ

ಸೊಸೆಯ ಕಿರುಕುಳಕ್ಕೆ ನೊಂದು ಮಾವ ನೇಣು ಬಿಗಿದು ಆತ್ಮಹತ್ಯೆ; ರಸ್ತೆ ಮೇಲೆ ಡೆತ್​ ನೋಟ್​

Pinterest LinkedIn Tumblr


ಮಂಡ್ಯ: ಸೊಸೆ ಕಿರುಕುಳ ತಾಳಲಾರದೆ ಮಾವ ರಸ್ತೆ ಮೇಲೆ ಡೆತ್​ ನೋಟ್​ ಬರೆದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿರಗಸೂರು ಗ್ರಾಮದಲ್ಲಿ ನಡೆದಿದೆ.

ಮಳವಳ್ಳಿ ತಾಲೂಕಿನ ಕಿರಗಸೂರು ಗ್ರಾಮದ ಮರಿಸ್ವಾಮಿ (60) ಮೃತರು. ಇವರು ನಾಲ್ಕು ವರ್ಷಗಳ ಹಿಂದೆ ಮಗ ಶಿವರಾಜು ಅವರಿಗೆ ಬೆಂಗಳೂರು ಮೂಲದ ಹೇಮಾ ಜತೆ ವಿವಾಹ ಮಾಡಿಸಿದ್ದರು. ಆದರೆ, ಸೊಸೆ ಮಗನೊಂದಿಗೆ ಒಂದು ತಿಂಗಳು ಕೂಡ ಸಂಸಾರ ಮಾಡದೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಳು ಎನ್ನಲಾಗಿದೆ.

ನಾಲ್ಕು ವರ್ಷ ಕಳೆದರೂ ಸೊಸೆ ಮನೆಗೆ ಬಾರದ ಕಾರಣಕ್ಕೆ ಮರಿಸ್ವಾಮಿ ಮಗನಿಗೆ ಇನ್ನೊಂದು ಮದುವೆ ಮಾಡಿಸಿದ್ದರು. ಆದರೆ, ಇದನ್ನು ತಿಳಿದ ಮೊದಲ ಸೊಸೆ ಹೇಮಾ ಬೆಂಗಳೂರಿನಿಂದ ಕಿರಗಸೂರಿಗೆ ಆಗಮಿಸಿ ವಿಚ್ಛೇದನ ನೀಡದೆ ಹೇಗೆ ಮದುವೆ ಮಾಡಿಸಿದ್ದೀರಿ. ಇದರ ಪರಿಹಾರವಾಗಿ 15 ಲಕ್ಷ ರೂ.ನೀಡಬೇಕು ಎಂದು ಒತ್ತಾಯಿಸಿದ್ದಳು ಎಂದು ಹೇಳಲಾಗಿದೆ. ವೃತ್ತಿಯಲ್ಲಿ ವಕೀಲೆಯಾಗಿರುವ ಹೇಮಾ ಮಾವನನ್ನು ಜೈಲಿಗೆ ಹಾಕುವುದಾಗಿ ಹೆದರಿಸುತ್ತಿದ್ದಳು ಎನ್ನಲಾಗಿದೆ.

ಬುಧವಾರ ಸಂಬಂಧಿಕರ ಜತೆ ಬಂದ ಹೇಮಾ ಹಣಕ್ಕಾಗಿ ಮಾವ ಹಾಗೂ ಗಂಡನ ಬಳಿ ಗಲಾಟೆ ಮಾಡಿಕೊಂಡಿದ್ದಳು. ಬೇಸತ್ತ ಮರಿಸ್ವಾಮಿ ಬೆಳಕವಾಡಿ ಠಾಣೆಯಲ್ಲಿ ಸೊಸೆ ವಿರುದ್ಧ ದೂರು ನೀಡಿದರೂ ಬೆಳಗ್ಗೆ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಾಯುವ ಮುನ್ನ ದೂರಿನ ಪತ್ರಕ್ಕೆ ಪೂಜೆ

ಎಲ್ಲ ಘಟನೆಗಳಿಂದ ಬೇಸತ್ತ ಮರಿಸ್ವಾಮಿ, ಗ್ರಾಮಕ್ಕೆ ತೆರಳುವ ಡಾಂಬರು ರಸ್ತೆಯಲ್ಲಿ, ನನ್ನ ಸಾವಿಗೆ ಸೊಸೆ ಹೇಮಾ ಮತ್ತು ಆಕೆಯ ಸಂಬಂಧಿಕರು ಕಾರಣ. ನಾನು ಸತ್ತ ನಂತರ ಶಾಸಕ ಅನ್ನದಾನಿಯನ್ನು ಕರೆಸಿ ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಬರೆದು, ರಸ್ತೆ ಬದಿಯಲ್ಲಿ ಟವಲ್​ ಮೇಲೆ ಪೊಲೀಸರಿಗೆ ದೂರು ನೀಡಲು ಬರೆದಿದ್ದ ಪತ್ರವನ್ನು, ಸ್ವಲ್ಪ ಹಣ ಇಟ್ಟು, ಅರಿಶಿಣ, ಕುಂಕುಮ ಹಾಕಿ ಪೂಜೆ ಮಾಡಿ ಪಕ್ಕದಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಕವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.