ಕರ್ನಾಟಕ

ಮುಂದಿನ 5ವರ್ಷದವರೆಗೆ ಜೆಡಿಎಸ್ ನ ಕುಮಾರಸ್ವಾಮಿಯೇ ಮುಖ್ಯಮಂತ್ರಿ: ಕಾಂಗ್ರೆಸ್

Pinterest LinkedIn Tumblr


ಹೊಸದಿಲ್ಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಧಿಕಾರ ಹಂಚಿಕೆ ಸೂತ್ರವನ್ನು ಇಂದು ಪ್ರಕಟಿಸುವ ಸಾಧ್ಯತೆಯಿದ್ದು, ಎಚ್‌.ಡಿ. ಕುಮಾರಸ್ವಾಮಿ ಅವರೇ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಲು ಕಾಂಗ್ರೆಸ್‌ ಒಪ್ಪಿಕೊಂಡಿದೆ. ಅಲ್ಲದೆ 2019ರ ಲೋಕಸಭಾ ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸಲು ನಿರ್ಧರಿಸಿವೆ.

ಖಾತೆಗಳ ಹಂಚಿಕೆ ಮಾತುಕತೆ ಸುದೀರ್ಘವಾಗುತ್ತಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವೆ ತೀವ್ರ ಭಿನ್ನಮತ ತಲೆದೋರಿದೆ ಎಂಬ ವದಂತಿಗಳಿಗೆ ವಿರುದ್ಧವಾಗಿ, ಸಮನ್ವಯ ಸಮಿತಿ ರಚನೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚನೆ ಮತ್ತು ಸರಕಾರದ ಸ್ಥಿರತೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್‌ ಟೈಮ್ಸ್ ಆಫ್‌ ಇಂಡಿಯಾಗೆ ಗುರುವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

ಪ್ರಮುಖ ಖಾತೆಗಳ ಪೈಕಿ ಹಣಕಾಸು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಗೃಹ ಖಾತೆಯನ್ನು ಕಾಂಗ್ರೆಸ್ ವಹಿಸಿಕೊಳ್ಳಲಿದೆ.

‘ಐದು ವರ್ಷಗಳ ಅವಧಿಗೆ ಸ್ಥಿರ ಸರಕಾರ ನಡೆಸಲು ಸಾಧ್ಯವಾಗುವಂತೆ ಎಲ್ಲ ಪ್ರಮುಖ ವಿಷಯಗಳನ್ನು ಲಿಖಿತ ಒಪ್ಪಂದದ ಮೂಲಕ ಬಗೆಹರಿಸಲಾಗುತ್ತಿದೆ. ಹೀಗಾಗಿಯೇ ಚರ್ಚೆ ದೀರ್ಘವಾಗುತ್ತಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸರಕಾರ ಪೂರ್ಣಾವಧಿಗೆ ಸ್ಥಿರ ಆಡಳಿತ ನೀಡಲು ಅಗತ್ಯವಿರುವ ಎಲ್ಲ ಸಿದ್ಧತೆಯನ್ನೂ ನಾವು ಮಾಡಿಕೊಳ್ಳುತ್ತಿದ್ದೇವೆ’ ಎಂದು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

Comments are closed.