ರಾಷ್ಟ್ರೀಯ

ನೀರಿನ ಡ್ರಮ್‌ಗಳಿಗೂ ಇಲ್ಲಿ ಬೀಗ!

Pinterest LinkedIn Tumblr


ಭಿಲ್ವಾರಾ: ಹಣ, ಚಿನ್ನ, ಬೆಲೆಬಾಳುವ ವಸ್ತುಗಳ ದರೋಡೆ ಮಾಡುವುದು ಸಾಮಾನ್ಯ. ನೀರಿನ ದರೋಡೆ ಕೂಡ ಆರಂಭವಾಗಿದೆ ಎಂದರೆ ನಂಬುತ್ತೀರಾ? ಹೌದು ಇದು ಸತ್ಯ. ಸದಾ ನೀರಿನ ಬವಣೆಯಿಂದ ಬಳಲುವ ಮರಳುಭೂಮಿ ನಾಡು ರಾಜಸ್ಥಾನದಲ್ಲಿ ನೀರಿನ ದರೋಡೆ ನಡೆಯುತ್ತಿದೆ. ಇದನ್ನು ತಪ್ಪಿಸಲು ಜನರು ನೀರು ತುಂಬಿರುವ ಡ್ರಮ್‌ಗಳಿಗೆ ಬೀಗ ಹಾಕಿಡುತ್ತಿದ್ದಾರೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಉಷ್ಣತೆ 45 ಡಿಗ್ರಿಗೆ ಏರುತ್ತಿದ್ದು, ನೀರಿನ ಸೀಮಿತ ಲಭ್ಯತೆಯಿಂದ ಕಂಗೆಟ್ಟಿರುವ ಸ್ಥಳೀಯರಿಗೆ ತಾವು ಶೇಖರಿಸಿಟ್ಟಿರುವ ನೀರನ್ನು ಕಾದುಕೊಳ್ಳುವುದೇ ದೊಡ್ಡ ತಲೆನೋವಾಗಿ ಹೋಗಿದೆ.

ಪರಸ್ರಾಂಪುರ ಎಂಬ ಗ್ರಾಮದ ಜನರಿಗೆ ಕುಡಿಯುವ ನೀರು ದೊರೆಯುವುದು ವಾರಕ್ಕೊಮ್ಮೆ ಮಾತ್ರ. ಹೀಗಾಗಿ ಅಲ್ಲಿ ನೀರು ಕದಿಯುವುದು ಸಾಮಾನ್ಯವಾಗಿ ಹೋಗಿದೆ. ಆ ಊರಲ್ಲಿ ನೀರಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆ ಬಂದಂತಾಗಿದ್ದು, ಹೀಗಾಗಿ ಜನರು ತಮ್ಮ ಮನೆ ಮುಂದೆ ಇಟ್ಟಿರುವ ನೀರಿನ ಡ್ರಮ್‌ಗಳಿಗೆ ಬೀಗ ಹಾಕಿಡುವ ಪರಿಸ್ಥಿತಿ ತಲೆದೋರಿದೆ. ಸ್ವತಃ ಪಂಚಾಯತ್ ಅಧಿಕಾರಿಗಳು ಸಹ ನೀರಿಗೆ ಬೀಗ ಹಾಕಿಡುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

” ನೀರಿನ ತೀವ್ರ ಕೊರತೆಯಿಂದಾಗಿ, ರಾತ್ರಿ ಸಮಯದಲ್ಲಿ ನೀರನ್ನು ಕದಿಯಲಾಗುತ್ತದೆ. ಆದ್ದರಿಂದ, ನೀರನ್ನು ಉಳಿಸಿಕೊಳ್ಳಲು ಡ್ರಮ್‌ಗಳಿಗೆ ಬೀಗ ಹಾಕಲು ನಾವು ನಿರ್ಧರಿಸಿದ್ದೇವೆ “, ಎಂದು ಹೇಳುತ್ತಾರೆ ಸ್ಥಳೀಯರು.

ನೀರು ದರೋಡೆಯಾಗುವ ಕಾಲ ಬರುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ಈ ಸನ್ನಿವೇಶವನ್ನು ನೋಡಿದರೆ ನೀರು ಚಿನ್ನ, ಬೆಳ್ಳಿಗಿಂತ ಹೆಚ್ಚಿನ ಬೆಲೆಯನ್ನು ಪಡೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ – ಸ್ಥಳೀಯ ನಿವಾಸಿ.

Comments are closed.