ಕರ್ನಾಟಕ

ಡಿಕೆಶಿಗೆ ಕಂದಾಯ ಅಥವಾ ಬೆಂಗಳೂರು ಅಭಿವೃದ್ಧಿ ಖಾತೆ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ?

Pinterest LinkedIn Tumblr


ಬೆಂಗಳೂರು: ಸಚಿವ ಸಂಪುಟದಲ್ಲಿ ತಾನು ಕಣ್ಣಿರಿಸಿದ್ದ ಇಂಧನ ಖಾತೆ ಕೈ ತಪ್ಪಿದ ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ತೀವ್ರ ಅಸಮಾಧಾನ ಹೊಂದಿದ್ದು, ಅವರಿಗೆ ಎರಡೆರಡು ಹುದ್ದೆಗಳು ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಸಚಿವ ಸಂಪುಟದಲ್ಲಿ ಕಂದಾಯ ಅಥವಾ ಬೆಂಗಳೂರು ಅಭಿವೃದ್ಧಿ ಖಾತೆ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಡಿ.ಕೆ.ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ರಾಗಿರುವ ಶಿವಕುಮಾರ್‌ ಅವರನ್ನು ಹೈಕಮಾಂಡ್‌ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದು, ಮಾತುಕತೆ ನಡೆಸಿ ಅವರನ್ನು ಸಮಧಾನ ಪಡಿಸುವ ಸಾಧ್ಯತೆಗಳಿವೆ.

ಇಂಧನ ಖಾತೆ ಕೈ ತಪ್ಪಿದ ಬಳಿಕ ಡಿ.ಕೆ.ಶಿವಕುಮಾರ್‌ ಅವರ ಪರೋಕ್ಷ ಅಸಮಧಾನ ಅವರ ಮಾತುಗಳಲ್ಲೇ ವ್ಯಕ್ತವಾಗಿತ್ತು.

ಸಂಪುಟ ವಿಸ್ತರಣೆ ಕುರಿತು ಹಿರಿಯ ನಾಯಕರು ನಡೆಸಿದ ಸಭೆಗೆ ತಮ್ಮನ್ನು ಯಾರೂ ಕರೆದಿಲ್ಲ ಎಂದಿದ್ದ ಡಿ.ಕೆ. ಶಿವಕುಮಾರ್‌, ನನ್ನ ಮ್ಯಾಚ್‌ ಡಿಫ‌ರೆಂಟ್‌, ನನ್ನ ಟಾರ್ಗೆಟ್‌ ಡಿಫ‌ರೆಂಟ್‌ ಎಂದಿದ್ದರು.

ಕಾಂಗ್ರೆಸ್‌ನ 78 ಶಾಸಕರಲ್ಲಿ ನಾನೂ ಒಬ್ಬ. ನನಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರೂ ಒಂದೇ, ನೀಡದಿದ್ದರೂ ಒಂದೇ. ನಾನು ಪಕ್ಷದ ನಂಬಿಕಸ್ಥ,ಪಕ್ಷ ಹೇಳುವ ಕೆಲಸ ಮಾಡಲು ಸಿದ್ಧ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದಿದ್ದರು.

ಎಚ್‌.ಡಿ.ರೇವಣ್ಣ ಜತೆ ನನ್ನನ್ನು ಯಾಕೆ ಹೋಲಿಕೆ ಮಾಡ್ತೀರಿ. ಅವರು ದೊಡ್ಡ ಕುಟುಂಬದ ಮಕ್ಕಳು, ನಾನು ಸಾಮಾನ್ಯ ರೈತನ ಮಗ.ಅವರು ಬೇಕಾದರೆ ಎಲ್ಲಾ ಖಾತೆಗಳನ್ನು ಇಟ್ಟುಕೊಳ್ಳಲಿ, ಸಿಎಂ ಬೇಕಾದರೂ ಆಗಲಿ ಎಂದು ಹೇಳಿಕೆ ನೀಡಿ ಇಂಧನ ಖಾತೆ ಕೈ ತಪ್ಪಿದ ಅಸಮಾಧಾನ ಹೊರ ಹಾಕಿದ್ದರು.

ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ನಲ್ಲಿ ತಾನೋರ್ವ ಪ್ರಭಾವೀ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.ರಾಜ್ಯಸಭಾ ಚುನಾವಣೆ ವೇಳೆ ಗುಜರಾತ್‌ ಶಾಸಕರ ರೆಸಾರ್ಟ್‌ ವಾಸದ ಜವಾಬ್‌ದಾರಿ, ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮಹತ್ತರ ಪಾತ್ರ, ಕಾಂಗ್ರೆಸ್‌ ಶಾಸಕರು ಬಿಜೆಪಿ ಪಾಲಾಗುವುದನ್ನು ತಪ್ಪಿಸಿದ ಸಾಧನೆ. ರಾಜರಾಜೇಶ್ವರಿ ನಗರ ಉಪಚುನಾವಣೆ ಹೊಣೆ ಹೊತ್ತು , ಸವಾಲುಗಳ ನಡೆವೆ ಪಕ್ಷವನ್ನು ಗೆಲ್ಲಿಸಿದ ಹೆಗ್ಗಳಿಕೆ ಡಿ.ಕೆ.ಶಿವಕುಮಾರ್‌ ಅವರದ್ದಾಗಿದೆ.

Comments are closed.