ಕರಾವಳಿ

ಅತ್ಯಾಚಾರಕ್ಕೆ ಪ್ರೇರಪಣೆ ಆರೋಪ : ಅಪ್ಪೆ ಟೀಚರ್ ತುಳು ಚಿತ್ರದ ವಿರುದ್ಧ ಮಹಿಳೆಯರ ಪ್ರತಿಭಟನೆ : ಸೆನ್ಸಾರ್ ಬೋರ್ಡ್‌ಗೆ ದೂರು

Pinterest LinkedIn Tumblr

ಮಂಗಳೂರು, ಜೂನ್ 03: ಜಿಲ್ಲೆಯ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ “ಅಪ್ಪೆ ಟೀಚರ್” ತುಳು‌ ಚಲನಚಿತ್ರದಲ್ಲಿ ಅತ್ಯಾಚಾರಕ್ಕೆ ಪ್ರೇರಪಣೆ ನೀಡುವ ಹಲವಾರು ಅಂಶಗಳನ್ನು ಅಳವಡಿಸುವ ಮೂಲಕ ಮಹಿಳೆಯರಿಗೆ ಅವಮಾನ‌ ಮಾಡಲಾಗಿದೆ ಎಂದು ಆರೋಪಿಸಿ ಶನಿವಾರ ಮಂಗಳೂರಿನಲ್ಲಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.

‘ಅಪ್ಪೆ’ ಎಂಬ ಹೆಸರಿನಿಂದ ಚಿತ್ರದಲ್ಲಿ ನಾಡಿನ ಮಾತೆಯರನ್ನು ಹಾಗೂ ಟೀಚರ್ ಎಂಬ ಹೆಸರಿನಿಂದ ಶಿಕ್ಷಕಿಯರನ್ನು ನಿಂದಿಸಲಾಗಿದೆ. ಅಲ್ಲದೆ ಅತ್ಯಾಚಾರ ಮಾಡಲು ಪ್ರಚೋದಿಸುವ ರೇಪ್‌ನ ಕೆಟ್ಟ ಸಂಭಾಷಣೆಯನ್ನು ಬಳಸಲಾಗಿದೆ. ಇದು ಮಹಿಳೆಯರ ಮೇಲಿನ ದೌರ್ಜನ್ಯವಾಗಿದೆ. ಅಷ್ಟೇ ಅಲ್ಲ ಈ ಸಿನೆಮಾವು ಪುರುಷರು ಹಾಗೂ ಮಹಿಳೆಯರು ಮುಜುಗರ ಪಡುವ ಸಂಭಾಷಣೆಗಳನ್ನು ಒಳಗೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿ ನಾವು ಯಾವತ್ತೂ ಕೂಡ ಹಾಸ್ಯಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಹಾಸ್ಯದ ಹೆಸರಿನಲ್ಲಿ ಅಸಹ್ಯ, ಅಪಹಾಸ್ಯ ಬೇಡ. ಈ ಚಿತ್ರದಲ್ಲಿ ಮಹಿಳೆಯರ ತೇಜೋವಧೆ ಮಾಡಲಾಗಿದೆ. ಸೆನ್ಸಾರ್ ಮಂಡಳಿಯಲ್ಲಿ ತುಳುವರಿದ್ದರೂ ಕೂಡ ಈ ಅಶ್ಲೀಲ ಸಂಭಾಷಣೆಗೆ ಕತ್ತರಿ ಪ್ರಯೋಗವಾಗದಿರುವುದು ವಿಪರ್ಯಾಸ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಡೀಡ್ಸ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಒಕ್ಕೂಟದ ಎಲ್ಲಾ ಮಹಿಳಾ ಮಂಡಲಗಳು, ಅಖಲಿ ಭಾರತ ಬಿಲ್ಲವ ಮಹಿಳಾ ಸಂಘ, ಸಹಕಾರ ಭಾರತಿ ಸಹಿತ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು.

ಪ್ರತಿಭಟನಾ ಸಭೆಗೂ ಮುಂಚೆ ತುಳು ಸಿನೆಮಾಗಳಲ್ಲಿನ ಅಶ್ಲೀಲ ಸಂಭಾಷಣೆ ಸಹಿತ ದೃಶ್ಯ ಮಾಧ್ಯಮಗಳಲ್ಲಿ ಮಹಿಳೆಯರನ್ನು ತಪ್ಪು ದಾರಿಗೆಳೆಯುವ ದೃಶ್ಯ, ಸಂಭಾಷಣೆಗಳನ್ನು ವಿರೋಧಿಸಿ ಮಂಗಳೂರಿನ ವಿವಿಧ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಿತು.

ಬಳಿಕ ಮಹಿಳಾ ಸಂಘಟನೆಗಳ ನಿಯೋಗವೊಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಮನವಿ ಸಲ್ಲಿಸಿತು. ಮಾತ್ರವಲ್ಲದೇ ಈ ಬಗ್ಗೆ ಸೆನ್ಸಾರ್ ಬೋರ್ಡ್ ಗೆ ಕೂಡ ದೂರು ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು..

ನಿಯೋಗದಲ್ಲಿ ಮಹಿಳಾ ಸಂಘಟನೆಯ ಪ್ರಮುಖರಾದ ಚಂಚಲಾ ತೇಜೋಮಯ, ಕೆ.ಎ. ರೋಹಿಣಿ, ಬಿ.ಎಂ.ರೋಹಿಣಿ, ತೇರಿ ಪಾಯಸ್, ಗುಲಾಬಿ ಬಿಳಿಮಲೆ, ಸುಖಲಾಕ್ಷಿ ಸುವರ್ಣ, ಸುಮನಾ ಶರಣ್, ಶಶಿಲೇಖಾ ಮುಂತಾದವರು ಪಾಲ್ಗೊಂಡಿದ್ದರು.

Comments are closed.