ಮುಂಬೈ: ಆಸ್ತಿ ಆಸೆಗಾಗಿ ಗಂಡನ ಕೊಲ್ಲಲು ಸುಪಾರಿ ನೀಡಿದ ಪತ್ನಿ ಹಾಗೂ ಹಂತಕನನ್ನ ಕಲ್ಯಾಣ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಯಾಣ್ ನಿವಾಸಿ 44 ವರ್ಷದ ಶಂಕರ್ ಗಾಯ್ಕ್‌ವಾಡ್ ತನ್ನ 15 ಕೋಟಿ ಮೌಲ್ಯದ ಆಸ್ತಿಯನ್ನ ಮಾರಾಟ ಮಾಡಲು ಮುಂದಾಗಿದ್ದರು. ಇದೇ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಪತ್ನಿ ಆಶಾ ಗಾಯ್ಕ್‌ವಾಡ್ ಗಂಡನನ್ನ ಕೊಲ್ಲಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಉದ್ಯಮಿ ಶಂಕರ್ ಗಾಯ್ಕ್‌ವಾಡ್ ಆಸ್ತಿ ಮಾರಾಟಕ್ಕೆ ಮುಂದಾದ ಕೆಲವೇ ದಿನಗಳಲ್ಲಿ ಕಾಣೆಯಾಗಿದ್ದರು. ಮೇ 18 ರಂದು ಶಂಕರ್ ಕಾಣೆಯಾಗಿದ್ದರೂ, ಪತ್ನಿ ಆಶಾ ಮೇ 21 ರಿಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೊದಲೇ ಅನುಮಾನಗೊಂಡ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಪತ್ನಿ ಆಶಾ ಮೊಬೈಲ್ ಕರೆ ದಾಖಲೆಗಳನ್ನ ಪರಿಶೀಲಿಸಿದಾಗ ಆಸ್ತಿಗಾಗಿ ಪತ್ನಿ ಆಶಾ, ಗಂಡನನ್ನ ಕೊಲ್ಲಲು ಸುಪಾರಿ ನೀಡಿರೋ ಆಂಶ ಬಯಲಾಗಿತ್ತು.
ಗಂಡನನ್ನ ಕೊಲ್ಲಲು ಸುಪಾರಿ ಕಿಲ್ಲರ್ ಹಿಮಾಂಶು ದುಬೆಗೆ 30 ಲಕ್ಷ ರೂಪಾಯಿ ನೀಡೋದಾಗಿ ಹೇಳಿದ್ದಳು. ಇಷ್ಟೇ ಅಲ್ಲ ಮುಂಗಡವಾಗಿ 4 ಲಕ್ಷ ರೂಪಾಯಿ ಪಾವತಿಸಿದ್ದಳು. ಇದೀಗ ಆಶಾ ಹಾಗೂ ಸುಪಾರಿ ಕಿಲ್ಲರ್ ಹಿಮಾಂಶುನನ್ನ ಬಂಧಿಸಿರುವ ಪೊಲೀಸರು ಇತರ ಆರೋಪಿಗಳಾದ ಜಗನ್ ಮಹಾತ್ರೆ, ರಾಜ್ ಸಿಂಗ್ ಹಾಗೂ ಪ್ರೀತಮ್ ತಲೆಮರೆಸಿಕೊಂಡಿದ್ದಾರೆ.
ಶಂಕರ್ ಗಾಯ್ಕ್‌ವಾಡ್ ಆಸ್ತಿಯಲ್ಲಿನ 2500 ಚದರ ಅಡಿ ಸೈಟ್‌ನ್ನ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಲು ಪತ್ನಿ ಆಶಾ ಮುಂದಾಗಿದ್ದರು. ಇದಕ್ಕಾಗಿ ಉದ್ಯಮಿಯಿಂದ ಆಶಾ ಮುಂಗಡ ಹಣವನ್ನೂ ಪಡೆದುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಶಂಕರ್ ಗಾಯ್ಕ್‌ವಾಡ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.
Comments are closed.