ಮುಂಬೈ

ಮದುವೆಯಾಗಿ ಎರಡೇ ವಾರದಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ!

Pinterest LinkedIn Tumblr

ಮುಂಬೈ: ಕಳೆದ ಶನಿವಾರ ವಾಯ್ ನ ಪಸರಾನಿ ಘಾಟ್ ಬಳಿ ದರೋಡೆ ನೆಪದಲ್ಲಿ 31 ವರ್ಷದ ನವವಿವಾಹಿತನನ್ನು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಇದೀಗ ತನಿಖೆಯಲ್ಲಿ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಮೇ 20ರಂದು ಮೃತ ಆನಂದ್ ಕಾಂಬ್ಳೆ ದೀಕ್ಷಾ ಓವಲ್ ಎಂಬುವರನ್ನು ವಿವಾಹವಾಗಿದ್ದನು. ಹೊಸದಾಗಿ ಮದುವೆಯಾದ ದಂಪತಿಗಳು ಶನಿವಾರ ಮಹಾಬಲೇಶ್ವರಕ್ಕೆ ಬೈಕಿನಲ್ಲಿ ತೆರಳಿದ್ದರು. ಆನಂದ್ ಅವರ ಸ್ನೇಹಿತ ರಾಜೇಂದ್ರ ಬೊಬಡೆ ಮತ್ತು ಅವರ ಪತ್ನಿ ಕಲ್ಯಾಣಿ ಸಹ ಜೊತೆ ಹೋಗಿದ್ದರು.

ಪಸರಾನಿ ಘಾಟ್ ಬಳಿ ಹೋಗುತ್ತಿದ್ದಾಗ ದೀಕ್ಷಾ ಆರೋಗ್ಯ ಸಮಸ್ಯೆಯಿಂದ ಬೈಕ್ ನಿಲ್ಲಿಸುವಂತೆ ಹೇಳಿದ್ದಾಳೆ. ನಂತರ ಇಬ್ಬರು ತಮ್ಮ ತಮ್ಮ ಬೈಕ್ ಗಳನ್ನು ಸ್ಥಳದಲ್ಲೇ ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ಆನಂದ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದರು.

ಈ ಪ್ರಕರಣ ಸಂಬಂಧ ದೀಕ್ಷಾ ಪ್ರಿಯಕರ ನಿಖಿಲ್ ಮಾಲೇಕರ ಕೈವಾಡ ಇದೆ ಎಂದು ಶಂಕಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದೀಕ್ಷಾ ಮತ್ತು ನಿಖಿಲ್ ಇಬ್ಬರು ಒಂದೇ ಪ್ರದೇಶದ ನಿವಾಸಿಗಳಾಗಿದ್ದು ಕೆಲವು ವರ್ಷಗಳಿಂದ ಇಬ್ಬರ ನಡುವೆ ಸಂಬಂಧ ಇತ್ತು. ಆದರೆ ಆನಂದ್ ಜೊತೆ ದೀಕ್ಷಾ ಪೋಷಕರು ಮದುವೆ ಮಾಡಿಸಿದ್ದಾರೆ. ಈ ಬಗ್ಗೆ ದೀಕ್ಷಾ ನಿಖಿಲ್ ಗೆ ಕರೆ ಮಾಡಿ ಹೇಳಿದ್ದಾಳೆ. ಬಳಿಕ ಇಬ್ಬರು ಸೇರಿ ಪ್ಲ್ಯಾನ್ ಮಾಡಿ ಆನಂದ್ ನನ್ನು ಕೊಲೆ ಮಾಡಿದ್ದಾರೆ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.