ಕರಾವಳಿ

ಶಿಕಾರಿಗೆ ಕರೆದೊಯ್ದು ಗೆಳೆಯನನ್ನೇ ‘ಶಿಕಾರಿ’ ಮಾಡಿದ ಆರೋಪ: ಐವರು ದೋಷಮುಕ್ತ

Pinterest LinkedIn Tumblr

ಕುಂದಾಪುರ: ಕಳೆದ ಐದು ವರ್ಷಗಳ ಹಿಂದೆ ತಾಲೂಕಿನ ವಂಡ್ಸೆ ಸಮೀಪದ ನೂಜಾಡಿಯ ಕೈಕಣ ಎಂಬಲ್ಲಿ ಶಿಕಾರಿಗೆಂದು ಪ್ರಭಾಕರ ಆಚಾರ್ಯ ಎನ್ನುವರನ್ನು ಕರೆದೊಯ್ದು ಬಳಿಕ ಬಂದೂಕಿನಿಂದ ಗುಂಡು ಹೊಡೆದು ಕೊಲೆ ಮಾಡಿದ ಆರೋಪ ಹೊತ್ತಿದ್ದ ಐವರನ್ನು ಕುಂದಾಪುರದಲ್ಲಿನ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯವು ಇಂದು ದೋಶಮುಕ್ತಗೊಳಿಸಿ ತೀರ್ಪು ನೀಡಿದೆ. ಐವರು ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಗಳು ರುಜುವಾತಾಗದ ಹಿನ್ನೆಲೆ ಇಲ್ಲಿನ ನ್ಯಾಯಾಧೀಶ ಪ್ರಕಾಶ್ ಖಂಡೇರಿ ದೋಷಮುಕ್ತಗೊಳಿಸಿದ್ದು ಆರೋಪಿಗಳ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ವಾದಿಸಿದ್ದರು.

ಸುಂದರ ಪೂಜಾರಿ, ನಾಗರಾಜ್ ಪೂಜಾರಿ, ಸಂತೋಷ ಪೂಜಾರಿ, ನಾಗರಾಜ್ ಅಲಿಯಾಸ್ ರಾಜ್ ಹಾಗೂ ಬಾಬು ಪೂಜಾರಿ ದೋಷಮುಕ್ತಗೊಂಡ ಆರೋಪಿಗಳು.

(ಮೃತ ಪ್ರಭಾಕರ ಆಚಾರ್ಯ)

ಘಟನೆ ವಿವರ: ಟವರ್ ಕಂಪೆನಿಯಲ್ಲಿ ಫೀಲ್ಡ್ ಆಫೀಸರ್ ಆಗಿದ್ದ ಪ್ರಭಾಕರ ಆಚಾರ್ಯ 11-08-2013ರಂದು ರಾತ್ರಿ ಮನೆಯಲ್ಲಿದ್ದು ಬಳಿಕ ಮನೆಯಿಂದ ತೆರಳಿದ್ದರು. ಮರುದಿನ ಬೆಳಿಗ್ಗೆ ಕೈಕಣ ಕಾಡಿನಲ್ಲಿ ಗುಂಡು ಹೊಡೆದ ಸ್ಥಿತಿಯಲ್ಲಿ ಅವರ ಮೃತದೇಹವು ಪತ್ತೆಯಾಗಿತ್ತು. ಸ್ನೇಹಿತರೇ ಆದ ಸುಂದರ್ ಪೂಜಾರಿ ಹಾಗೂ ಮತ್ತಿತರು ಪ್ರಭಾಕರ ಅವರನ್ನು ಶಿಕಾರಿಗೆಂದು ಕರೆದೊಯ್ದು ಬಳಿಕ ಆತನಿಗೆ ಗುಂಡು ಹೊಡೆದು ಸಾಯಿಸಿದ್ದರೆಂದು ಆರೋಪಿಸಲಾಗಿತ್ತು. ಪ್ರಭಾಕರ್ ಹಾಗೂ ಸುಂದರ್ ಪೂಜಾರಿ ನಾದಿನಿಯ ನಡುವಿನ ಅನೈತಿಕ ಸಂಬಂಧ ಹಾಗೂ ಸುಂದರ್ ಪೂಜಾರಿ ಮತ್ತು ಎರಡನೇ ಆರೋಪಿ ನಾಗರಾಜ್ ಪೂಜಾರಿ ಕೊಡಬೇಕಾಗಿದ್ದ ಹಣವನ್ನು ಪ್ರಭಾಕರ ಆಚಾರ್ಯ ಮರಳಿ ಕೇಳಿದ್ದಕ್ಕೆ ಆತನನ್ನು ವ್ಯವಸ್ಥಿತವಾಗಿ ಕೊಂದಿದ್ದಾರೆಂದು ಆರೋಪ ಮಾಡಲಾಗಿತ್ತು, ಮೃತನ ಸಹೋದರ ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಂದಿನ ಬೈಂದೂರು ಸಿಪಿ‌ಐ ಅರುಣ ಬಿ. ನಾಯ್ಕ್ ತನಿಖಾಧಿಕಾರಿಯಾಗಿದ್ದು ಸಿಪಿ‌ಐ ಸುದರ್ಶನ್ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಫಾರೆನ್ಸಿಕ್ ತಜ್ಞರು, ವೈದ್ಯರು ಸೇರಿದಂತೆ ಸುಮಾರು 23 ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನಡೆದಿತ್ತು. ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿರುವುದು, ಪರೀಕ್ಷೆಗೋಳಪಡಿಸಿದ ಗುಂಡು ವಶಕ್ಕೆ ಪಡೆದ ಬಂದೂಕಿನಿಂದ ಹಾರಿದ ಬಗ್ಗೆ ಮತ್ತು ಅದೇ ದಿನದಂದು ಸಿಡಿದ ಬಗ್ಗೆ ಸೂಕ್ತ ಸಾಕ್ಷ್ಯಗಳಿರಲಿಲ್ಲ. ಆರೋಪಿ ಕೈಯಲ್ಲಿ ಮದ್ದಿನ ಅಂಶ ಇರಲಿಲ್ಲ, ಬಂದೂಕಿನ ಮೇಲೆ ಬೆರಳಿನ ಮುದ್ರೆ ಇರಲಿಲ್ಲ. ಅಲ್ಲದೇ ಕೊಲೆ ಮಾಡುವ ಯಾವುದೇ ಉದ್ದೇಶವೂ ಆರೋಪಿಗಳಿಗಿರಲಿಲ್ಲ ಎಂದು ವಾದಿಸಲಾಗಿತ್ತು. ಹೀಗೆಯೇ ಹಲವು ಪ್ರಮುಖ ಸನ್ನಿವೇಶಗಳು ರುಜುವಾತಾಗದ ಹಿನ್ನೆಲೆ ನ್ಯಾಯಾಧೀಶರು ಆರೋಪಿಗಳನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

ಇದನ್ನೂ ಓದಿರಿ: Vandse: Accidental gun -shot claims the life of youth

Comments are closed.