ಕರಾವಳಿ

ತ್ಯಾಗಮಯಿ ಕಾರ್ಯಕರ್ತರ ಶ್ರಮವೇ ನನ್ನಂತಹ ಸಾಮಾನ್ಯ ಕಾರ್ಯಕರ್ತನ ಗೆಲುವಿಗೆ ಕಾರಣ : ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಊಟ, ತಿಂಡಿ ಬಿಟ್ಟು ಬಿರುಬಿಸಿಲಿನಲ್ಲಿ ದುಡಿದ ಪರಿಣಾಮವಾಗಿ ನನ್ನಂತಹ ಸಾಮಾನ್ಯ ಕಾರ್ಯಕರ್ತನ ಗೆಲುವಾಗಿದೆ. ಕಾರ್ಯಕರ್ತರ ತ್ಯಾಗವನ್ನು ಬಣ್ಣಿಸಲು ಶಬ್ದಗಳೇ ಸಾಕಾಗುವುದಿಲ್ಲ ಎಂದು ಮಂಗಳೂರು ನಗರ ದಕ್ಷಿಣ ನೂತನ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

26 ನೇ ದೇರೆಬೈಲ್ ವಾರ್ಡ್ ಬಿಜೆಪಿ ವತಿಯಿಂದ ಉರ್ವಾ ರಾಧಾಕೃಷ್ಣ ಮಂದಿರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ವೇದವ್ಯಾಸ ಕಾಮತ್ ಅವರು ಮಾತನಾಡಿದರು.

ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗೂ ಭೇಟಿಕೊಟ್ಟು ಮತದಾರರನ್ನು ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿದ್ದಾರೆ. ಪ್ರತಿ ಒಂದು ಕಡೆ ಅಭ್ಯರ್ಥಿಯೇ ಬರಬೇಕು ಎಂದು 38 ವಾರ್ಡಿನ ಪ್ರತಿ ಬೂತಿನಿಂದ ಪ್ರೀತಿಯ ಆಹ್ವಾನವಿರುತ್ತಿತ್ತು. ಎಷ್ಟೋ ಕಡೆ ತಾವು ಪ್ರಚಾರದ ಸಮಯದಲ್ಲಿ ಸಮಯ ಹೊಂದಿಸಲಾಗದೇ ವಾರ್ಡ್ ಭೇಟಿಕೊಡುವಾಗ ತಡವಾಗುತ್ತಿತ್ತು. ಬೆಳಿಗ್ಗೆ 11.30 ಕ್ಕೆ ಹೋಗಬೇಕಾದ ಕಡೆ ತಲುಪುವಾಗ ಸಂಜೆ 4 ಗಂಟೆ ಆದದ್ದು ಇದೆ. ಅಂತಹ ಏರಿಯಾದಲ್ಲಿ ಕಾರ್ಯಕರ್ತರು ಊಟಕ್ಕೂ ಹೋಗದೆ ಕಾದು ಕುಳಿತದ್ದು ನೋಡಿದಾಗ ಮನಸ್ಸು ತುಂಬಿ ಬರುತ್ತಿತ್ತು ಎಂದು ವೇದವ್ಯಾಸ ಕಾಮತ್ ಹೇಳಿದರು.

ಅಭ್ಯರ್ಥಿ ಯಾರೇ ಆಗಲಿ, ಬಿಜೆಪಿ ಗೆಲ್ಲಬೇಕು ಎಂದು ಮಂಗಳೂರು ನಗರ ದಕ್ಷಿಣದ ಮತದಾರರು, ಕಾರ್ಯಕರ್ತರು ನಿರ್ಧರಿಸಿ ಆಗಿತ್ತು. ನಾನು ಜೀವನದಲ್ಲಿ ಹಲವಾರು ರೀತಿಯ ತ್ಯಾಗಗಳನ್ನು ನೋಡಿದ್ದೇನೆ. ಆದರೆ ಅಭ್ಯರ್ಥಿಯ ಗೆಲುವು ಒಂದೇ ಗುರಿ ಎಂದು ದುಡಿದ ಕಾರ್ಯಕರ್ತರ ತ್ಯಾಗವನ್ನು ಬಿಜೆಪಿ ಪಕ್ಷದಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಹೇಳಿದರು.

ತಾರಾನಾಥ್ ಉರ್ವಾ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು, ಅರುಣ್ ಉರ್ವಾ ಸ್ವಾಗತ ಭಾಷಣ  ನಡೆಸಿಕೊಟ್ಟರು,ದಾಮೋದರ್ ಚೆಟ್ಟಿಯಾರ್ ಶಾಸಕರ ಅಭಿನಂದನಾ ಪತ್ರವನ್ನು  ವಾಚಿಸಿದರು , ಬಾಲಕೃಷ್ಣ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಮುಖಂಡರಾದ ರವಿಶಂಕರ್ ಮಿಜಾರ್, ವಾರ್ಡ್ ಅಧ್ಯಕ್ಷ ಅರುಣ್ ಕುಮಾರ್, ಬೃಜೇಶ್ ಚೌಟ, ವಿನಯ ಎಲ್ ಶೆಟ್ಟಿ, ಜಗಧೀಶ್ ಶೆಟ್ಟಿ, ಜನಾರ್ಧನ್ ಕುಡ್ವ , ಶ್ರೀಮತಿ ಶಂಕರಿ, ಶ್ರೀಮತಿ ಗೀತಾ, ಶ್ರೀಮತಿ ಅಮಿತಾಕಲಾ, ವಿಜಯ್ ಉರ್ವಾ , ಅಜಿತ್ ಉರ್ವಾ ಮುಂತಾದವರು ಉಪಸ್ಥಿತರಿದ್ದರು .

Comments are closed.