ರಾಷ್ಟ್ರೀಯ

ತೈಲ ಬೆಲೆ ದಿನ ನಿತ್ಯ ಪರಿಷ್ಕರಣೆಯಲ್ಲಿ ಬದಲಾವಣೆ ಇಲ್ಲ: ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್‌

Pinterest LinkedIn Tumblr


ದಹೇಜ್‌ (ಗುಜರಾತ್‌): ದಿನ ನಿತ್ಯ ಇಂಧನ ದರ ಪರಿಷ್ಕರಣೆ ಮಾಡುವ ವಿಧಾನವನ್ನು ಪುನರ್‌ ಪರಿಶೀಲನೆ ಮಾಡುವ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟಪಡಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಇಂಧನ ಬೆಲೆ ದಿನ ನಿತ್ಯ ಪರಿಷ್ಕರಣೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ಇಂಧನ ಬೆಲೆ ಏರಿಕೆಯಾಗಿದೆ. ತೈಲ ಬೆಲೆಯನ್ನು ಸಾಮಾನ್ಯ ಜನರ ಕೈಗೆಟಕುವ ದರದಲ್ಲಿ ನೀಡುವ ಬಗ್ಗೆ ದೀರ್ಘ ಕಾಲಿಕ ಪರಿಹಾರ ಕಂಡುಕೊಳ್ಳುವ ಕೆಲಸ ಸರಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೇ 29ರ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾಗಿದೆ. ದೇಶದಲ್ಲೂ ಬೆಲೆ ಇಳಿಯುತ್ತಿದ್ದು, ಈ ವರೆಗೆ ಪೆಟ್ರೋಲ್‌ ಪ್ರತಿ ಲೀಟರ್‌ಗೆ 47 ಪೈಸೆ ಹಾಗೂ ಡೀಸಲ್‌ 34 ಪೈಸೆಯಷ್ಟು ಕಡಿಮೆಯಾಗಿದೆ ಎಂದರು.

ರಾಜ್ಯಗಳು ತಮ್ಮ ವ್ಯಾಟ್‌ (ತೆರಿಗೆ) ಕಡಿತಗೊಳಿಸಲು ಅವಕಾಶವಿದೆ. ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ತೆರಿಗೆ ಇಳಿಸುವಂತೆ ನಿರ್ದೇಶಿಸಲು ಸಾಧ್ಯವಿಲ್ಲ. ಆದರೆ ಮನವಿ ಮಾಡಬಹುದು ಅಷ್ಟೆ. ಕೇರಳ ತೆಗದುಕೊಂಡ ನಿರ್ಧಾರ ಸ್ವಾಗತಾರ್ಹ. ಆದರೆ ಈ ನಿರ್ಣಯಕ್ಕೆ ರಾಜಕೀಯದ ಬಣ್ಣ ಹಚ್ಚಬಾರದು ಎಂದು ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

Comments are closed.