ರಾಷ್ಟ್ರೀಯ

ಬೈಕ್ ಮತ್ತು ಕಾರು ಅಪಘಾತದ ಗಾಯಾಳುವಿನ ಜೀವ ರಕ್ಷಿಸಿದ ಟ್ರಾಫಿಕ್ ಪೊಲೀಸ್

Pinterest LinkedIn Tumblr


ಚೆನ್ನೈ: ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡು ರಸ್ತೆಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಬೈಕ್ ಸವಾರನ ಜೀವವನ್ನು ಚೆನ್ನೈನ ಟ್ರಾಫಿಕ್ ಹೆಡ್‌ಕಾನ್ಸ್‌ಟೆಬಲ್ ಒಬ್ಬರು ಪ್ರಥಮ ಚಿಕಿತ್ಸೆ ನೀಡಿ ಉಳಿಸಿದ್ದಾರೆ.

ಭಾನುವಾರ ಸಂಜೆ ಎಗ್ಮೋರ್‌ ಟ್ರಾಫಿಕ್‌ ಎನ್‌ಫೋರ್ಸ್‌ಮೆಂಟ್ ವಿಂಗ್‌ನ ಹೆಡ್‌ಕಾನ್ಸ್‌ಟೆಬಲ್ ಎಸ್‌. ಶಿವಕುಮಾರನ್ ಪ್ಯಾಂಥನ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಪ್ರಸನ್ನ ಎಂಬ ಬೈಕ್ ಸವಾರ ಅಪಘಾತಕ್ಕೊಳಗಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದರು.

ಅವರು ಹೆಲ್ಮೆಟ್ ಧರಿಸಿದೇ ಇದ್ದಿದ್ದರಿಂದ ತಲೆ ರಸ್ತೆಗೆ ಬಡಿದು ಪ್ರಜ್ಞೆ ಕಳೆದುಕೊಂಡಿದ್ದರು. ಸುತ್ತಲೂ ಸೇರಿದ ಜನರು ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಹೆಚ್‌ಸಿ ಶಿವಕುಮಾರ್, ಪೊಲೀಸ್ ತರಬೇತಿ ಸಂದರ್ಭದಲ್ಲಿ ಕಲಿತುಕೊಂಡಿದ್ದ ಸಿಪಿಆರ್ (ಹೃದಯ ಮತ್ತು ಶ್ವಾಸಕೋಶ ಪ್ರಚೋದಕ) ಮತ್ತು ಪ್ರಥಮ ಚಿಕಿತ್ಸೆಯನ್ನು ಗಾಯಾಳುವಿನ ಮೇಲೆ ಪ್ರಯೋಗಿಸಿದರು. ಇದರಿಂದ ಗಾಯಾಳು ಪ್ರಸನ್ನ ಅವರಿಗೆ ತಕ್ಷಣ ಪ್ರಜ್ಞೆ ಮರುಕಳಿಸಿದೆ. ಅಷ್ಟರಲ್ಲೇ ಆಂಬುಲೆನ್ಸ್ ಕೂಡ ಬಂದಿದ್ದು, ಪ್ರಸನ್ನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಡ್‌ಕಾನ್ಸ್‌ಟೆಬಲ್ ಸ್ಪಂದನೆ ಮತ್ತು ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ಕೇಳಿಬಂದಿದ್ದು, ಪೊಲೀಸ್ ಇಲಾಖೆ ಮತ್ತು ವೈದ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ತರಬೇತಿ ಸಂದರ್ಭದಲ್ಲಿ ಕಲಿತ ಪ್ರಥಮ ಚಿಕಿತ್ಸಾ ಕ್ರಮವೂ ಪ್ರಯೋಜನಕ್ಕೆ ಬಂದು ಜೀವ ಉಳಿಸಿರುವುದಕ್ಕೆ ಶಿವಕುಮಾರ್‌ಗೆ ಹೆಮ್ಮೆಯಿದೆ.

Comments are closed.