ಕರಾವಳಿ

ಪಠ್ಯ ಪುಸ್ತಕಗಳಲ್ಲಿ ಸಾಮರಸ್ಯ ಕದಡುವ ಯತ್ನ ಆರೋಪ : ಕ್ರೈಸ್ತ ಮತ್ತು ಇಸ್ಲಾಂ ಅಧ್ಯಾಯ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಜೂನ್.7: ಶಿಕ್ಷಣ ಇಲಾಖೆಯ ಈ ಬಾರಿಯ 9ನೇ ತರಗತಿಯ ಅಂಗ್ಲ ಮಾದ್ಯಮ ಶಾಲೆಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಎಂಬ ಅದ್ಯಯವನ್ನು ಸೇರ್ಪಡೆ ಮಾಡಿದ್ದು, ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕೂಡಲೇ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಅಧ್ಯಾಯವನ್ನು ಕೈ ಬಿಡುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ -ಬಜರಂಗ ದಳ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.

ವಿಶ್ವ ಹಿಂದೂ ಪರಿಷತ್ -ಬಜರಂಗ ದಳದ ವತಿಯಿಂದ ಇಂದು ಬೆಳಿಗ್ಗೆ ನಗರದ ಜ್ಯೋತಿ ಸಮೀಪದ ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ, ಇದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೆಳೆಸಲು ಮತ್ತು ಸಾಮರಸ್ಯ ಕದಡಲು ಮಾಡಿರುವ ಸಂಚು ಎಂದು ಆರೋಪಿಸಿದ್ದು, ರಾಜ್ಯದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಅಧ್ಯಾಯವನ್ನು ಕೈ ಬಿಡುವಂತೆ ಆಗ್ರಹಿಸಿದೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್, ಮಹಮ್ಮದ್ ಪೈಗಂಬರ್ ಮತ್ತು ಯೇಸುವಿನ ಬಗ್ಗೆ ಉಲ್ಲೇಖಿಸಿ 9ನೇ ತರಗತಿಯ ಮಕ್ಕಳ ಮೇಲೆ ಒತ್ತಡ ಪೂರ್ವಕವಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತವನ್ನು ಹೇರುವ ತಂತ್ರ ನಡೆಯುತ್ತಿದ್ದು ಇದು ಖಂಡನಾರ್ಹ. ಯಾವ ಕಾರಣಕ್ಕೂ ಈ ಪಠ್ಯದಲ್ಲಿರುವ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಿಯರಿಗೆ ಸಂಬಂಧಿಸಿದ ಅಧ್ಯಾಯ ಇರಬಾರದು. ತಕ್ಷಣ ಇದನ್ನು ಕೈ ಬಿಟ್ಟು ಹೊಸ ಮುದ್ರಿತ ಪಠ್ಯವನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.

ಹಿಂದಿನ ರಾಜ್ಯ ಸರಕಾರವು ವ್ಯವಸ್ಥಿತವಾಗಿ ಹಿಂದೂ ಸಮಾಜವನ್ನು ಧಮನ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಪಠ್ಯಪುಸ್ತಕ ತಯಾರಿ ಸಮಿತಿಯಲ್ಲಿ ದೇಶವಿರೋಧಿಗಳು ಹಾಗೂ ವಾಮಪಂಥಿಯರನ್ನು ಕೂರಿಸಿ ಶಿಕ್ಷಣ ಇಲಾಖೆಯಲ್ಲೂ ಸಹ ಎಡಪಂಥಿಯರ ವಾದಗಳನನ್ನು ಹೇರುವ ಮತ್ತು ದೇಶದ ಬಗ್ಗೆ ಕೀಳಾಗಿ ಹಾಗು ಹಿಂದೂ ಧರ್ಮವನ್ನು ಅವಹೇಳನ ಮಾಡಲು ಪ್ರಯತ್ನಿಸುವ ಮತ್ತು ಸಾಮರಸ್ಯ ಕದಡಲು ಪ್ರಯತ್ನಿಸುವ ವ್ಯಕ್ತಿಗಳನ್ನು ನೇಮಿಸುವ ಮೂಲಕ ಈ ಷಡ್ಯಂತ್ರವನ್ನು ಮಾಡಿದೆ. ತಕ್ಷಣ ಕರ್ನಾಟಕ ಶಿಕ್ಷಣ ಇಲಾಖೆ ಎಚ್ಚೆತ್ತು 9ನೇ ತರಗತಿಯ ಪಠ್ಯಪುಸ್ತಕದ ಅಧ್ಯಾಯ 01ನ್ನು ಬದಲಾಯಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು. ಈ ಕುರಿತು ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಶರಣ್ ಪಂಪ್‌ವೆಲ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ದುರ್ಗಾ ವಾಹಿನಿಯ ನಾಯಕಿ ಆಶಾ ಜಗದೀಶ್, ಬಜರಂಗ ದಳದ ಪ್ರಮುಖರಾದ ಶಿವಾನಂದ ಮೆಂಡನ್, ಪ್ರಮೋದ್ ಪಂಪ್‌ವೆಲ್ ಮತ್ತಿತರರು ಮಾತನಾಡಿದರು.

Comments are closed.