ರಾಷ್ಟ್ರೀಯ

ದ್ವೇಷ, ಅಸಹಿಷ್ಣುತೆಯಿಂದ ದೇಶದ ಅಸ್ಮಿತೆಗೆ ಧಕ್ಕೆ: ಪ್ರಣಬ್‌ ಮುಖರ್ಜಿ

Pinterest LinkedIn Tumblr

ನಾಗ್ಪುರ: ‘ದ್ವೇಷ, ಧರ್ಮ, ಮತೀಯತೆ ಮತ್ತು ಅಸಹಿಷ್ಣುತೆ ಭಾರತದ ರಾಷ್ಟ್ರೀಯತೆಯನ್ನು ಹಾಳುಮಾಡುತ್ತದೆ. ಸಹಿಷ್ಣುತೆಯೇ ಭಾರತದ ಹೆಗ್ಗುರುತು. ಭಾರತದ ರಾಷ್ಟ್ರೀಯತೆಯು ಸಹಬಾಳ್ವೆ, ಹೊಂದಾಣಿಕೆ ಮತ್ತು ವಿಶ್ವಮಾನವ ತತ್ವಗಳಿಂದ ಹೊರಹೊಮ್ಮಿದೆ,” ಇದು ಮಾಜಿ ರಾಷ್ಟ್ರಪತಿ, ಕಾಂಗ್ರೆಸ್‌ ಹಿರಿಯ ಧುರೀಣ ಪ್ರಣಬ್‌ ಮುಖರ್ಜಿ ಅವರು ಆರೆಸ್ಸೆಸ್‌ ವೇದಿಕೆಯಿಂದ ರವಾನಿಸಿದ ಸಂದೇಶ.

ಪುತ್ರಿ ಸಮೇತ ಬಹುತೇಕ ಎಲ್ಲ ಕಾಂಗ್ರೆಸ್‌ ಮುಖಂಡರ ವಿರೋಧ ಹಾಗೂ ಭಾರಿ ಕುತೂಹಲದ ನಡುವೆ ಗುರುವಾರ ಆರೆಸ್ಸೆಸ್‌ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಯಾವುದೇ ವಿವಾದಕ್ಕೆ ಆಸ್ಪದ ನೀಡದ ತಮ್ಮ ಭಾಷಣದ ಮೂಲಕ ಗಮನ ಸೆಳೆದರು.

”ನನ್ನ ದೇಶ ಭಾರತದ ಬಗ್ಗೆ ರಾಷ್ಟ್ರ, ರಾಷ್ಟ್ರೀಯತೆ, ಮತ್ತು ದೇಶಪ್ರೇಮದ ಬಗ್ಗೆ ನನ್ನ ಗ್ರಹಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ,” ಎಂದು ಮಾತು ಆರಂಭಿಸಿದ ಅವರು, ಭಾರತದ ಹಿರಿಮೆಯನ್ನು ಕೊಂಡಾಡಿದರು.

”ಬಹುತ್ವದಲ್ಲೇ ಭಾರತದ ಆತ್ಮ ಅಡಗಿದೆ. ಒಂದು ಭಾಷೆ, ಒಂದು ಧರ್ಮಕ್ಕೆ ಭಾರತ ಸೀಮಿತವಾಗಿಲ್ಲ. ಭಾರತದ ಮೇಲೆ ಎರಗಿ ಬಂದ ಪ್ರತಿಯೊಬ್ಬ ಕ್ರಮಣಕಾರ ಹಾಗೂ ವಿದೇಶಿ ಶಕ್ತಿಯೂ ಭಾರತದ ಸಾಮಾಜಿಕ ಪರಿಸರದಲ್ಲಿ ಲೀನವಾಗಿದೆ,”ಎಂದರು.

ಯಾರೂ ಅನ್ಯರಲ್ಲ: ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣವ್‌ ಅವರ ಭಾಗವಹಿಸುವಿಕೆ ಬಗ್ಗೆ ನಡೆದ ಚರ್ಚೆ ಅರ್ಥಹೀನ. ಯಾಕೆಂದರೆ ಆರ್‌ಎಸ್‌ಎಸ್‌ಗೆ ಯಾರೂ ಹೊರಗಿನವರಲ್ಲ ಎಂದು ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

Comments are closed.