– ಶರತ್ ಶರ್ಮ ಕಲಗಾರು
ಬೆಂಗಳೂರು: ಒಂದಕ್ಕೆರಡು ಪಟ್ಟು ಲಾಭ ಕೊಡುವ ಆಮಿಷವೊಡ್ಡಿ ಜನರನ್ನು ವಂಚಿಸುವ ಜಾಲ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಇಂಥಾ ನೂರಾರು ಪ್ರಕರಣಗಳು ಆಚೆ ಬಂದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಹೆಚ್ಚಿನ ಲಾಭದ ಆಸೆ ತೋರಿಸಿ ಸಾವಿರಾರು ಮಂದಿಗೆ ವಂಚಿಸಿದ ಪ್ರಕರಣವೊಂದು ನಗರದ ಎಚ್ಎಸ್ಆರ್ ಲೇಔಟಿನಲ್ಲಿ ನಡೆದಿದೆ. ಅಕ್ರಮದ ಅಂದಾಜು ಬರೋಬ್ಬರಿ 3,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಎನ್ನಲಾಗಿದೆ.
ಸದ್ಯ ಪ್ರಕರಣದ ತನಿಖೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಿಂದ ನಗರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾವಣೆಯಾಗಿದೆ. ಆರೋಪಿಗಳು ಯಾರೆಂಬುದು ಪೊಲೀಸರಿಗೆ ಗೊತ್ತಿದ್ದರೂ, ಇದುವರೆಗೂ ಇರುವಿಕೆಯ ಸುಳಿವು ಪತ್ತೆಯಾಗಿಲ್ಲ.
ಏನಿದು ಪ್ರಕರಣ?:
ಚಂದ್ರಶೇಖರ್ ಗುಪ್ತ ಗಾಲ ಎಂಬ ವ್ಯಕ್ತಿಯೊಬ್ಬ ಬೆಂಗಳೂರಿನ ಎಚ್ಎಸ್ಆರ್ ಲೇಔಟಿನಲ್ಲಿ ಈಸಿ ಪೇ ಕ್ಯಾಶ್ ಎಂಬ ಹೆಸರಿನಲ್ಲಿ ಇ-ಕಾಮರ್ಸ್ ಸಂಸ್ಥೆಯನ್ನು ತೆರೆದರು. ಗ್ರಾಹಕರನ್ನು ಸೆಳೆಯಲು ಏಜೆಂಟ್ಗಳನ್ನು ನೇಮಿಸಿಕೊಂಡರು. ಸಂಸ್ಥೆಯಲ್ಲಿ ಹಣ ತೊಡಗಿಸಿದರೆ ಒಂದಕ್ಕೆರಡು ಪಟ್ಟು ಲಾಭ ನೀಡುವುದಾಗಿ ಆಮಿಷ ಒಡ್ಡಿದರು. ರೂ. 9,000 ಹಣ ನೀಡಿದರೆ, 200 ದಿನಗಳ ಕಾಲ ಪ್ರತಿ ದಿನ ರೂ 100, ರೂ. 27,000 ತೊಡಗಿಸಿದರೆ 200 ದಿನಗಳ ಕಾಲ ಪ್ರತಿನಿತ್ಯ ರೂ. 300 ಮತ್ತು ರೂ. 81,000 ತೊಡಗಿಸಿದರೆ ರೂ. 1,000 ಪ್ರತಿನಿತ್ಯ 200 ದಿನಗಳ ಕಾಲ ನೀಡುವುದಾಗಿ ಚಂದ್ರಶೇಖರ್ ಗ್ರಾಹಕರನ್ನು ನಂಬಿಸಿದರು.
ಪ್ರತಿ ನಿತ್ಯ ಹಣ ಹೇಗೆ ನೀಡುತ್ತಾರೆ, ಮತ್ತು ಅಷ್ಟು ಲಾಭವನ್ನು ಗ್ರಾಹಕರಿಗೆ ಹೇಗೆ ನೀಡಲು ಸಾಧ್ಯ ಎಂದು ಕೇಳಿದರೆ ಅದಕ್ಕೆ ಉತ್ತರ ಚಂದ್ರಶೇಖರ್ ಬಳಿ ಇತ್ತು. ಸಂಸ್ಥೆ ಬೇರೆ ಬೇರೆ ಉದ್ಯಮದಲ್ಲಿ ಹಣ ತೊಡಗಿಸುತ್ತದೆ, ಅದರಿಂದ ಬರುವ ವ್ಯಾಪಕ ಲಾಭದಿಂದ ಗ್ರಾಹಕರಿಗೆ ಹಂಚಿಕೆ ಮಾಡಲಾಗುತ್ತದೆ, ಎಂದರು. ಜತೆಗೆ ಬೇರೆ ಉದ್ಯಮದಲ್ಲಿ ತೊಡಗಿಸಲು ಸಂಸ್ಥೆಯಲ್ಲಿ ಹಣವಿಲ್ಲದ ಕಾರಣ ಗ್ರಾಹಕರಿಂದ ಹಣ ಪಡೆಯುತ್ತಿರುವುದಾಗಿ ತಿಳಿಸಿದರು. ಇದೊಂದು ರೀತಿಯ ಕ್ರೌಡ್ ಫಂಡಿಂಗ್ ಎಂಬಂತೆ ಗ್ರಾಹಕರನ್ನು ನಂಬಿಸಿದರು.
ಚಂದ್ರಶೇಖರ್ ಗುಪ್ತಾ ಮತ್ತು ಇತರೆ ಸದಸ್ಯರು, ಗ್ರಾಹಕರೊಬ್ಬರ ಮಗುವಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು. (ಸಾಂದರ್ಭಿಕ ಚಿತ್ರ)
ಹೆಚ್ಚಿನ ಲಾಭ ಸಿಗಲಿದೆ ಎಂಬ ಆಸೆಗಾಗಿಯೋ ಅಥವಾ ಅಮಾಯಕ ನಂಬಿಕೆಯಿಂದಲೋ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಸಂಸ್ಥೆಯಲ್ಲಿ ಹಣ ತೊಡಗಿಸಿದರು ಎನ್ನಲಾಗಿದೆ. ಜತೆಗೆ ಗ್ರಾಹಕರು ಇನ್ನೊಬ್ಬ ಗ್ರಾಹಕರನ್ನು ಹಣ ತೊಡಗಿಸಲು ಕರೆ ತಂದರೆ ಪ್ರತಿ ನಿತ್ಯ ರೂ. 500 ಹೆಚ್ಚು ಕೊಡುವುದಾಗಿಯೂ ಸಂಸ್ಥೆ ಹೇಳಿತ್ತು. ಕೆಲ ದಿನಗಳ ಕಾಲ ಹಣವನ್ನೂ ಪಾವತಿ ಮಾಡುತ್ತಿದ್ದ ಹಿನ್ನಲೆಯಲ್ಲಿ ಜನ ಕೂಡ ನಂಬಿದರು. ಹೆಚ್ಚು ಗ್ರಾಹಕರನ್ನು ಸಂಸ್ಥೆಗೆ ಕರೆ ತಂದರು. ಆದರೆ ಒಂದು ಬಾರಿ ಅಧಿಕ ಮೊತ್ತ ಸಿಗುತ್ತಲೇ ಸಂಸ್ಥೆಯ ಮಾಲೀಕ ಮತ್ತು ಇತರೆ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ.
ಸುಮಾರು 3,000 ಕೋಟಿಗೂ ಅಧಿಕ ಹಣವನ್ನು ಗ್ರಾಹಕರಿಂದ ಈಸಿ ಪೇ ಕ್ಯಾಶ್ ಸಂಸ್ಥೆ ಕಲೆ ಹಾಕಿ ಈಗ ಬಾಗಿಲು ಹಾಕಿದೆ. ಸಿಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ನಂತರ ಜನವರಿಯಲ್ಲಿ ಎಚ್ಎಸ್ಆರ್ ಬಡಾವಣೆಯಲ್ಲಿರುವ ಕಚೇರಿಗೆ ಭೇಟಿ ನೀಡಿದ್ದಾರೆ. ಇದನ್ನು ಮುಂಚೆಯೇ ಶಂಕಿಸಿದ್ದ ಚಂದ್ರಶೇಖರ್ ಮತ್ತು ಸಿಬ್ಬಂದಿ ಕಚೇರಿಯಲ್ಲಿ ಒಂದೇ ಒಂದು ಸಾಕ್ಷಿ ಉಳಿಸದೇ ಪರಾರಿಯಾಗಿದ್ದಾರೆ.
ದೂರುದಾರರಲ್ಲಿ ಒಬ್ಬರಾದ ನದೀಮ್ ಶರೀಫ್ ನ್ಯೂಸ್ 18 ಜತೆ ಮಾತನಾಡಿ ಮೋಸಹೋದ ಬಗೆಯ ಬಗ್ಗೆ ವಿವರಿಸಿದರು. “ಚಂದ್ರಶೇಖರ್ ಎಂಬ ವ್ಯಕ್ತಿಯೊಬ್ಬ ಸಂಸ್ಥೆಯನ್ನು ತೆರೆದರು. ಜನರಿಗೆ ಆಕರ್ಷಕ ಆಫರ್ಗಳನ್ನು ನೀಡುವ ಮೂಲಕ ವಂಚನೆ ಮಾಡಿ ಓಡಿ ಹೋಗಿದ್ದಾರೆ. ಚಂದ್ರಶೇಖರ್ ಸಂಸ್ಥೆಯ ಬ್ಯುಸಿನೆಸ್ ನೆಟ್ವರ್ಕಿಂಗ್ ಹೆಡ್ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದರು. ಅವರ ವರ್ತನೆಯನ್ನು ನೋಡಿದರೆ, ವಂಚಿಸುತ್ತಾರೆ ಅನಿಸುತ್ತಿರಲಿಲ್ಲ. ಆದರೆ ಈಗ ನಂಬಿದ ಎಲ್ಲರಿಗೂ ಮೋಸ ಮಾಡಿ ಓಡಿ ಹೋಗಿದ್ದಾರೆ,” ಎನ್ನುತ್ತಾರೆ ನದೀಮ್.
ವಂಚನೆಗೊಳಗಾದ ವ್ಯಕ್ತಿಗಳ ಅಭಿಪ್ರಾಯದ ಪ್ರಕಾರ, ವಾಟ್ಸಾಪ್ ಮೂಲಕ ಸ್ಕೀಂ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗಿತ್ತು. ವಿನೋದ್ ನಾಯಕ್ ಎಂಬ ಇನ್ನೊಬ್ಬ ದೂರುದಾರರ ಪ್ರಕಾರ ಗ್ರಾಹಕರಿಂದ ಪಡೆದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ತೊಡಗಿಸುತ್ತೇವೆ ಎಂದು ಚಂದ್ರಶೇಖರ್ ಗುಪ್ತಾ ಹೇಳಿದ್ದರು.
ಈ ಹಿಂದೆ ಉದ್ಯಮಿ ಸಚಿನ್ ನಾಯಕ್ ಕೂಡ ಇದೇ ಎಚ್ಎಸ್ಆರ್ ಬಡಾವಣೆಯಲ್ಲಿಯೇ ಕಚೇರಿ ತೆರೆದು ಸಾವಿರಾರು ಕೋಟಿ ವಂಚನೆ ಮಾಡಿದ ಘಟನೆಯನ್ನು ಈಗ ನೆನೆಯಬಹುದು. ಗೃಹಶೋಭಾ, ಗೃಹ ಕಲ್ಯಾಣ್, ಟಿಜಿಎಸ್, ಡ್ರೀಮ್ಸ್ ಜಿಕೆ ಮತ್ತಿತರ ರಿಯಲ್ ಎಸ್ಟೇಟ್ ಸಂಸ್ಥೆಗಳ ಹೆಸರಿನಲ್ಲಿ ಸಾವಿರಾರು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿತ್ತು. ಆ ಪ್ರಕರಣದ ತನಿಖೆಯನ್ನು ಸಿಐಡಿ ಮಾಡುತ್ತಿದ್ದು, ಸಚಿನ್ ನಾಯಕ್ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಅಮಾಯಕರು ಇರುವ ವರೆಗೂ ವಂಚಿಸುವವರು ಇರುತ್ತಾರೆ ಎಂಬ ಮಾತು ಪದೇ ಪದೇ ಸಾಭೀತಾಗುತ್ತಿದೆ. ವಂಚನೆ ಮಾಡಿದ ವ್ಯಕ್ತಿಗಳು ಜಾಮೀನು ಪಡೆದು ಪರಾರಿಯಾಗುತ್ತಲೇ ಇದ್ದಾರೆ. ವೈಟ್ ಕಾಲರ್ ಅಪರಾಧ ಕೃತ್ಯಗಳನ್ನು ಮಾಡಿ ಸಲೀಸಾಗಿ ತಪ್ಪಿಸಿಕೊಳ್ಳಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿ ಚಂದ್ರಶೇಖರ್ ಗುಪ್ತಾ ಬೆಳಕಿಗೆ ಬಂದಿದ್ದಾರೆ. ನೀರವ್ ಮೋದಿ, ಮೇಹುಲ್ ಚೋಕ್ಸಿ, ವಿಜಯ್ ಮಲ್ಯಾರಂತೆ ಚಂದ್ರಶೇಖರ್ ಗುಪ್ತಾ ದೇಶ ಬಿಡುವ ಮೊದಲು, ಬಂಧನವಾಗುತ್ತಾರ ಕಾದು ನೋಡಬೇಕು.
Comments are closed.