ಕರಾವಳಿ

ಒಳಗಿನಿಂದ ಡೋರ್ ಲಾಕ್ ಮಾಡಿ ಮಲಗಿದ ಬಾಲಕಿ : ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ರಕ್ಷಣೆ

Pinterest LinkedIn Tumblr

ಮಂಗಳೂರು, ಜೂನ್.08: ವಸತಿ ಸಮುಚ್ಛಯವೊಂದರ ಪ್ಲಾಟ್‌ನೊಳಗೆ ಬಾಗಿಲಿಗೆ ಲಾಕ್ ಮಾಡಿ ಮಲಗಿದ್ದ ಬಾಲಕಿಯೋರ್ವಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆಯೊಂದು ಗುರುವಾರ ಸಂಜೆ ಮಂಗಳೂರಿನ ಬಿಜೈಯಲ್ಲಿ ನಡೆದಿದೆ.

ಮಂಗಳೂರಿನ ಬಿಜೈ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದ್ದು, ಈ ಅಪಾರ್ಟ್ ಮೆಂಟ್‌ನಲ್ಲಿರುವ ನಾಲ್ಕನೇ ಮಹಡಿಯ ಫ್ಲಾಟ್‌ನಲ್ಲಿ ವಾಸವಾಗಿದ್ದ 12ರ ಹರೆಯದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗಡೆಯಿಂದ ಡೋರ್ ಲಾಕ್ ಮಾಡಿ ಮಲಗಿದ್ದಳು.

ಸಂಜೆ ಮನೆಗೆ ಬಂದ ಬಾಲಕಿಯ ಹೆತ್ತವರು ಎಷ್ಟೇ ಬಾಗಿಲು ಬಡಿದರೂ, ಬೆಲ್ ಬಾರಿಸಿದರೂ ಬಾಲಕಿ ಎದ್ದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಪಕ್ಕದ ಫ್ಲಾಟ್‌ನಲ್ಲಿ ವಾಸವಿದ್ದ ನಿವೃತ್ತ ಪೊಲೀಸ್ ಅಧಿಕಾರಿ ವಿನಯ ಗಾಂವ್‌ಕಾರ್ ಅವರಲ್ಲಿ ಈ ಬಗ್ಗೆ ತಿಳಿಸಿದ್ದು, ಕೂಡಲೇ ಅವರು ಮಂಗಳೂರಿನ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.

ತಕ್ಷಣ್ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಧುನಿಕ ಲ್ಯಾಡರ್ ಮೂಲಕ ನಾಲ್ಕನೇ ಮಹಡಿಯನ್ನು ತಲುಪಿ ಬಾಲ್ಕನಿಯ ಮೂಲಕ ಮನೆಯೊಳಗೆ ತೆರಳಿ ಮನೆಯ ಡೋರನ್ನು ತೆರೆದಿದ್ದಾರೆ. ಬಳಿಕ ಕೋಣೆಯೊಳಗೆ ಮಲಗಿದ್ದ ಬಾಲಕಿಯನ್ನು ಎಬ್ಬಿಸಿ ರಕ್ಷಿಸಿದ್ದಾರೆ. ಈ ವೇಳೆ ಮುಂಭಾಗಿಲ ಮೂಲಕ ಮನೆಯೊಳಗೆ ಪ್ರವೇಶಿಸಿದ ಮನೆಮಂದಿ ಬಾಲಕಿಯನ್ನು ನೋಡಿದ ಬಳಿಕ ಆತಂಕದಿಂದ ದೂರವಾಗಿದ್ದಾರೆ.

ಕೆಲವು ದಿನಗಳ ಹಿಂದೆ ನಗರದ ಶಕ್ತಿನಗರದ ಅಪಾರ್ಟ್ ಮೆಂಟ್‌ವೊಂದರ ( ಫ್ಲಾಟ್‌ನಲ್ಲಿ ಸೂಕ್ತ ಭದ್ರತೆ ಇಲ್ಲದೆ ಇದ್ದುದ್ದರಿಂದ) ಮಹಡಿಯಿಂದ ಕೆಳಗೆ ಬಿದ್ದು 5 ವರ್ಷದ ಮಗುವೊಂದು ಮೃತಪಟ್ಟ ಹಿನ್ನೆಲೆಯಲ್ಲಿ ಈ ಘಟನೆಯಿಂದ ಪೋಷಕರು ಇನ್ನಷ್ಟು ಆತಂಕಗೊಂಡಿದ್ದರು.

Comments are closed.