ಕಾರವಾರ: ಪೇಜಾವರ ಶ್ರೀ ಒಬ್ಬ ಹುಚ್ಚ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ ಎಂಬುದಾಗಿ ಫೇಸ್‍ಬುಕ್ ನಲ್ಲಿ ಸ್ಟೇಟಸ್ ಹಾಕಿದ ಇಬ್ಬರ ವಿರುದ್ಧ ಸಚಿವರ ಆಪ್ತ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.
ಉಡುಪಿ ಮೂಲದ ರಾಜೇಶ್ ಅಡಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಮಹೇಶ್ ಗೌಡ ಎಂಬವರು ಫೇಸ್ ಬುಕ್ ನಲ್ಲಿ, “ಪ್ರಧಾನಿ ಮೋದಿ ವಿರುದ್ಧ ಪೇಜಾವರ ಶ್ರೀಗಳ ಹೇಳಿಕೆ ಖಂಡಿಸಿ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಪೇಜಾವರ ಶ್ರೀ ಒಬ್ಬ ಹುಚ್ಚ ಎಂದಿದ್ದಾರೆ” ಎನ್ನುವ ಸ್ಟೇಟಸ್ ಹಾಕಿದರು. ಈಗ ಇವರಿಬ್ಬರ ವಿರುದ್ಧ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಅವರು ಶಿರಸಿ ನಗರ ಠಾಣೆಯಲ್ಲಿ ಜೂನ್ 2 ರಂದು ದೂರು ದಾಖಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕುರಿತು ಅಭಿಪ್ರಾಯ ತಿಳಿಸಿದ್ದ ಸುದ್ದಿ ಹಾಗೂ ಪೇಜಾವರ ಶ್ರೀಗಳ ಫೋಟೋ ಬಳಕೆ ಮಾಡಿದ್ದು, ಅದರ ಮೇಲೆ, “ಪೇಜಾವರ ಶ್ರೀಗಳು ಒಬ್ಬ ಹುಚ್ಚರಾಗಿದ್ದಾರೆ. ಅವರು ಈ ಹೇಳಿಕೆಯ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಬರೆದಿದ್ದು, ಇದನ್ನು ಸಚಿವ ಅನಂತ್ ಕುಮಾರ್ ಹೆಗಡೆ ಅವರೇ ಹೇಳಿದ್ದಾರೆ ಎನ್ನುವಂತೆ ಬಿಂಬಿಸಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಲಾಗಿತ್ತು.
ಸಚಿವರು ಈ ರೀತಿಯ ಹೇಳಿಕೆ ನೀಡಿಲ್ಲ. ಪೇಜಾವರ ಶ್ರೀಗಳ ಹಾಗೂ ಸಚಿವರ ಸಾಮರಸ್ಯ ಹಾಳು ಮಾಡಲು ಸದ್ಯ ರಾಜೇಶ್ ಅಡಿ ಹಾಗೂ ಮಹೇಶ್ ಗೌಡ ಈ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಶಿರಸಿ ನಗರ ಠಾಣೆಯಲ್ಲಿ 504 ಕಾಲಂ ಅಡಿ ಪ್ರಕರಣ ದಾಖಲಾಗಿದೆ.
Comments are closed.