ಕರಾವಳಿ

ಗೌರಿ ಲಂಕೇಶ್ ಹತ್ಯೆ ಪ್ರಕರಣ : ಹತ್ಯೆ ನಡೆದ ದಿನ ಆರೋಪಿ ನವೀನ್ ಪತ್ನಿ ಜೊತೆ ಮಂಗಳೂರಿನಲ್ಲಿ ವಾಸ್ತವ್ಯ..?

Pinterest LinkedIn Tumblr

ಬೆಂಗಳೂರು, ಜೂನ್.09: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಸಂಘಪರಿವಾರದ ಸದಸ್ಯ ಕೆ.ಟಿ.ನವೀನ್‌ ಕುಮಾರ್, ಹತ್ಯೆ ನಡೆದ ದಿನದಂದು ಮಂಗಳೂರಿನ ಆಶ್ರಮವೊಂದರಲ್ಲಿ ಪತ್ನಿ ಜೊತೆ ವಾಸ್ತವ್ಯ ಹೂಡಿದ್ದ ಎಂದು ಸಿಟ್(ಎಸ್‌ಐಟಿ) ಮೂಲಗಳು ತಿಳಿಸಿವೆ.

2017ರ ಸೆಪ್ಟೆಂಬರ್ 5 ರಂದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಂದು, ಆರೋಪಿ ನವೀನ್‌ ಕುಮಾರ್, ಬೆಂಗಳೂರಿನಿಂದ 70 ಕಿ.ಮೀ ದೂರವಿರುವ ಮದ್ದೂರಿನ ಮನೆಗೆ ತರಾತುರಿಯಲ್ಲಿ ಬಂದು ಪತ್ನಿಯನ್ನು ಮಂಗಳೂರಿನ ಆಶ್ರಮಕ್ಕೆ ಕರೆದೊಯ್ದಿದ್ದ. ಆ ಮೂಲಕ ಕೊಲೆ ಪ್ರಕರಣದಲ್ಲಿ ತನ್ನ ಕೈವಾಡ ಏನೂ ಇಲ್ಲ ಎಂಬ ಸನ್ನಿವೇಶವನ್ನು ಸೃಷ್ಟಿಸಲು ಆತ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಪತ್ನಿ ಹೇಳಿಕೆ :

ನವೀನ್ ಪತ್ನಿ ಸಿ.ಎಸ್.ರೂಪಾ ಹೇಳಿಕೆ ದಾಖಲಿಸಿಕೊಂಡಿರುವ ಸಿಟ್ ತನಿಖಾಧಿಕಾರಿಗಳಿಗೆ ಈತ ಹತ್ಯೆಯಲ್ಲಿ ಭಾಗಿಯಾಗಿರುವುದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ.

ನವೀನ್ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಹುಬ್ಬಳ್ಳಿಗೆ ತೆರಳುತ್ತಿರುವುದಾಗಿ ಹೇಳಿದ್ದರು. ಆದರೆ, ಮರುದಿನವೇ ಮನೆಗೆ ಮರಳಿದ ನವೀನ್, ರೈಲಿನಲ್ಲಿ ಚೀಲ ಕಳೆದುಹೋಯಿತು ಎಂದು ಹೇಳಿದರು. ದೇಹಕ್ಕೆ ಆರಾಮವಿಲ್ಲ, ಮಂಗಳೂರಿಗೆ ಹೋಗೋಣ ಎಂದರು.

ಸೆ.5ರ ರಾತ್ರಿಯೇ ಮಂಗಳೂರು ತಲುಪಿದೆವು. ಬಸ್ ನಿಲ್ದಾಣದಿಂದ ಕಾರೊಂದು ನಮ್ಮನ್ನು ಸನಾತನ ಆಶ್ರಮಕ್ಕೆ ಕರೆದುಕೊಂಡು ಹೋಗಲು ಬಂದಿತ್ತು. ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದನ್ನು ನಾವು ಮರುದಿನ ಬೆಳಗ್ಗೆ ಟಿವಿಯಲ್ಲಿ ನೋಡಿದೆವು ಎಂದು ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಕೃಪೆ : ವಾಭಾ

Comments are closed.