ಮಂಗಳೂರು, ಜೂನ್.10: ಕರಾವಳಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಲವೆಡೆಗಳಲ್ಲಿ ದುರ್ಘಟನೆಗಳು ಸಂಭವಿಸುತ್ತಿದ್ದು, ಭಾರೀ ಗಾಳಿಮಳೆಗೆ ನಗರದವಿವಿಧೆಡೆಗಳಲ್ಲಿ ಬೃಹತ್ ಮರಗಳು ಉರುಳಿ ಬೀಳುತ್ತಿರುವುದು ಮುಂದುವರಿದಿದೆ.
ನಿನ್ನೆ ರಾತ್ರಿಯಿಡಿ ನಿರಂತರವಾಗಿ ಮಳೆಯಾಗುತ್ತಿದ್ದು, ಇಂದು ಮುಂಜಾನೆ ಬೀಸಿದ ಭಾರೀ ಗಾಳಿಯ ಹೊಡೆತಕ್ಕೆ ಸಿಲುಕಿ ಬೃಹತ್ ಮರವೊಂದು ಉರುಳಿ ಎರಡು ಮನೆಗಳ ಮೇಲೆ ಬಿದ್ದಿದೆ. ನಗರದ ಹಂಪನಕಟ್ಟೆಯ ಸಿಗ್ನಲ್ ವೃತ್ತದ ಸಮೀಪವಿರುವ ಐತಪ್ಪ ಶೆಟ್ಟಿ ಕಂಪೌಂಡಿ(ಅಕ್ಕಮಕ್ಕ ಹೋಟೆಲ್)ನಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಎರಡು ಮನೆ ಹಾಗೂ ಕಂಪೌಂಡ್ ಗೋಡೆಗೆ ಹಾನಿಯಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳೀಯ ಕಾರ್ಪೋರೇಟರ್ ಪೂರ್ಣಿಮಾ, ಪ್ರಮುಖರಾದ ವಸಂತ್ ಜೆ ಪೂಜಾರಿ, ಮುರಳೀಧರ ಮುಂತಾದವರ ಜೊತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಶಾಸಕರು ತಕ್ಷಣವೇ ಅಗ್ನಿ ಶಾಮಕದಳ, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಮತ್ತು ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತೆರವು ಕ್ರಮಕ್ಕೆ ಸೂಚಿಸಿದರು. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಉರುಳಿ ಬಿದ್ದ ಮರವನ್ನು ತೆರವುಗೊಳಿಸಿದರು.
Comments are closed.