ಕರ್ನಾಟಕ

ಕಡ್ಡಾಯ, ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕೆಲಸ: ನಟ ಪ್ರಕಾಶ್​ ರಾಜ್​

Pinterest LinkedIn Tumblr


ಮಂಡ್ಯ: ಸರ್ಕಾರ ನಡೆಯುವುದು ಜನರ ತೆರಿಗೆ ಹಣದಿಂದ‌. ಅವರ ಜೀವನ ನಡೆಯುತ್ತಿರುವುದು ನಮ್ಮ ತೆರಿಗೆ ಹಣದಿಂದ. ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲೇ ಉತ್ತಮ ಶಿಕ್ಷಣ ಕೊಡಬೇಕು. ಇಲ್ಲದಿದ್ದರೆ ಸರ್ಕಾರದ ಕತ್ತಿನ ಪಟ್ಟಿ ಹಿಡಿದು ಕೇಳುವ ಹಕ್ಕು ನಮಗಿದೆ ಎಂದು ನಟ ಪ್ರಕಾಶ್​ ರಾಜ್ ತಿಳಿಸಿದ್ದಾರೆ.

ಕೆ.ಆರ್.ಪೇಟೆಯ ಶತಮಾನದ ಶಾಲೆಯ ಪಾಲಕರ ಸಭೆಯಲ್ಲಿ ಮಾತನಾಡಿ, ಕಡ್ಡಾಯ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕೆಲಸ. ಆದರೆ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಶಿಕ್ಷಣ ವ್ಯಾಪಾರೀಕರಣಕ್ಕೆ ವಿಷಾದ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಮನೆಗೆ ಹೋಗುತ್ತಾರೆ ಎಂಬ ಕೀಳರಿಮೆಯಿಂದ ಪಾಲಕರು ಅವರನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಆದರೆ, ಗಂಡು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಪಾಲಕರು ಶ್ರೀಮಂತಿಕೆಯನ್ನು ಮೆರೆಯಬೇಕು ಎಂದರು.

ಶಾಲೆಯಲ್ಲಿ ಶೌಚಾಲಯವಿರುವುದಿಲ್ಲ ಎಂದು ತಾಯಂದಿರು ಹೆಣ್ಣು ಮಕ್ಕಳಿಗೆ ಕಡಿಮೆ ನೀರು ಕುಡಿಸಿ ಕಳುಹಿಸುತ್ತಾರೆ ಎಂದ ಅವರು, ಶಿಕ್ಷಣ ರಸ್ತೆ ಬದಿಯ ಜಾಹೀರಾತಾಗಿದೆ. ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸಕ್ಕೆ ಮುಂದಾಗೋಣ ಎಂದರು.

Comments are closed.