ಕರ್ನಾಟಕ

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಬಲ 35ಕ್ಕೆ ಏರಿಕೆ: ಬಿಜೆಪಿ- 18, ಜೆಡಿಎಸ್‌- 15 

Pinterest LinkedIn Tumblr


ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ಮತ ಎಣಿಕೆ ಮಂಗಳವಾರ ಮಧ್ಯರಾತ್ರಿವರೆಗೂ ನಡೆದು ಅಂತಿಮವಾಗಿ ಬಿಜೆಪಿಯ ಅ.ದೇವೇಗೌಡ ಜಯ ಗಳಿಸಿದರು. ಪ್ರಾಶಸ್ತ್ಯ ಮತಗಳ ಎಣಿಕೆ ನಂತರ ಬಿಜೆಪಿಯ ಅ. ದೇವೇಗೌಡ ಅವರು 17,702 ಮತ ಪಡೆದು ಜಯಶಾಲಿಯಾದರು.

ಕಾಂಗ್ರೆಸ್‌ನ ರಾಮೋಜಿಗೌಡ 12,838, ಜೆಡಿಎಸ್‌ನ ಅಚ್ಚೇಗೌಡ ಶಿವಣ್ಣ 7,177 ಮತ ಪಡೆದು ಪರಾಭವಗೊಂಡರು. ಅ.ದೇವೇಗೌಡ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಬಿಜೆಪಿಯ ರಾಮಚಂದ್ರಗೌಡ ಅವರ ಎದುರು ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿ ಜೆಡಿಎಸ್‌ ಟಿಕೆಟ್‌ ಸಿಗದ ಕಾರಣ ಬಿಜೆಪಿ ಸೇರ್ಪಡೆಗೊಂಡು ಸ್ಪರ್ಧೆ ಮಾಡಿದ್ದರು.

ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ ಹುಮನಾಬಾದ ಅವರು ಬಿಜೆಪಿ ಅಭ್ಯರ್ಥಿ ಹೊಸಪೇಟೆಯ ಕೆ.ಬಿ.ಶ್ರೀನಿವಾಸ ಅವರನ್ನು 321 ಮತಗಳ ಅಂತರದಿಂದ
ಸೋಲಿಸಿದ್ದಾರೆ. ಡಾ.ಚಂದ್ರಶೇಖರ ಪಾಟೀಲ 18,768 ಮತಗಳನ್ನು ಪಡೆದರೆ, ಕೆ.ಬಿ. ಶ್ರೀನಿವಾಸ 18, 447 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ವಿಧಾನಪರಿಷತ್‌ ಬಲಾ ಬಲ: ಈ ಫ‌ಲಿತಾಂಶದ ಬಳಿಕ ಒಟ್ಟು 75 ಸದಸ್ಯ ಬಲದ ಮೇಲ್ಮನೆಯಲ್ಲಿ ಕಾಂಗ್ರೆಸ್‌ ತನ್ನ ಬಲವನ್ನು 35ಕ್ಕೆ ಹೆಚ್ಚಿಸಿಕೊಂಡಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಪ್ರಸ್ತುತ ಐದು ಸ್ಥಾನಗಳು ಖಾಲಿ ಇವೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ ಅರ್ಧದಷ್ಟು ಸ್ಥಾನಗಳನ್ನು ಪಡೆದಂತಾಗಿದೆ.ಅಲ್ಲದೆ, ಜೆಡಿಎಸ್‌ನ 15 ಸದಸ್ಯರೂ ಸೇರಿದಂತೆ ಮಿತ್ರ ಪಕ್ಷಗಳ ಒಟ್ಟು ಸದಸ್ಯಬಲ 50ಕ್ಕೆ ಏರಿದಂತಾಗಿದೆ. ಪ್ರಸ್ತುತ 70 ಸದಸ್ಯರ ಪೈಕಿ ಕಾಂಗ್ರೆಸ್‌- 35,ಬಿಜೆಪಿ- 18, ಜೆಡಿಎಸ್‌- 15
ಸದಸ್ಯರನ್ನು ಹೊಂದಿದ್ದು, ಒಬ್ಬ ಕಾಂಗ್ರೆಸ್‌ ಬೆಂಬಲಿತ ಮತ್ತು ಇನ್ನೊಬ್ಬ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯರು
ಇದ್ದಾರೆ.

ಐದು ಸ್ಥಾನಗಳು ಖಾಲಿ: ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್‌, ಬಿಜೆಪಿಯ ಕೆ.ಎಸ್‌.ಈಶ್ವರಪ್ಪ ಮತ್ತು ವಿ. ಸೋಮಣ್ಣ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ
ಆಯ್ಕೆಯಾಗಿರುವುದರಿಂದ ಈ ಸ್ಥಾನಗಳು ತೆರವುಗೊಂಡಿವೆ. ಅದೇ ರೀತಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಗೆದ್ದಿದ್ದರಿಂದ ಅವರ ಸ್ಥಾನವೂ ತೆರವಾಗಿದೆ. ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ನಾಮನಿರ್ದೇಶಿತ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಕೂಡ ರಾಜಿನಾಮೆ ನೀಡಿದ್ದರಿಂದ ಈ ಸ್ಥಾನವೂ ಖಾಲಿಯಾಗಿದೆ. ಈ ಪೈಕಿ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಮತ್ತು ಪದವೀಧರ ಕ್ಷೇತ್ರದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ.

ಇನ್ನೊಂದೆಡೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶನಗೊಂಡಿದ್ದ ಕೆ.ಬಿ.ಶಾಣಪ್ಪ ಮತ್ತು ತಾರಾ ಅನುರಾಧ ಅವರ ಅಧಿಕಾರಾವಧಿ ಆಗಸ್ಟ್‌ 10ಕ್ಕೆ ಕೊನೆಗೊಳ್ಳಲಿದೆ. ಈ ಎರಡು ಸ್ಥಾನಗಳ ಜತೆಗೆ ಎಂ.ಡಿ.ಲಕ್ಷ್ಮೀನಾರಾಯಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸರ್ಕಾರದಿಂದ ಮೂವರನ್ನು ನಾಮನಿರ್ದೇಶನ ಮಾಡಲು ಅವಕಾಶವಿದ್ದು, ಈ ಪೈಕಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಎಷ್ಟು ಸ್ಥಾನ ಹಂಚಿಕೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ವಿಧಾನಪರಿಷತ್‌
ಒಟ್ಟು ಬಲಾಬಲ- 75
ಕಾಂಗ್ರೆಸ್‌ 35
ಬಿಜೆಪಿ 18
ಜೆಡಿಎಸ್‌ 15
ಪಕ್ಷೇತರರು 02
ಖಾಲಿ 05

Comments are closed.