ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಕುಂಭ ದ್ರೋಣ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದು,ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಳಸ- ಹೊರನಾಡು ಸಂಪರ್ಕ ಬಂದ್
ಕಳಸ, ಹೊರನಾಡು, ಕುದುರೆಮುಖ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪದಲ್ಲಿರುವ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಕಾಣದಂತೆ ನೆರೆ ನೀರು ಹರಿಯುತ್ತಿದೆ.
ಅಪಾಯದ ಮಟ್ಟ ಮೀರಿರುವ ಹಿನ್ನಲೆಯಲ್ಲಿ ಖಾಸಗಿ ಬಸ್, ಪ್ರವಾಸಿ ವಾಹನಗಳ ಸಂಚಾರ ಸಾಧ್ಯವಾಗುತ್ತಿಲ್ಲ. ನೀರಿನ ಪ್ರಮಾಣ ತಗ್ಗುವವರೆಗೂ ಸಂಚಾರ ಸಾಧ್ಯವಿಲ್ಲ.
ಅಪಾಯದ ಮಟ್ಟ ಮೀರಿ ಭದ್ರಾ ನದಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ.
ಶೃಂಗೇರಿಯಲ್ಲಿ ಆತಂಕ
ಶೃಂಗೇರಿ ದೇವಾಲಯದ ಮೆಟ್ಟಿಲವರೆಗೆ ತುಂಗಾ ನದಿ ನೀರು ಬಂದಿದ್ದು .ಹೆಚ್ಚಿನ ಕಡೆ ರಸ್ತೆಗಳೆಲ್ಲಾ ನೀರಿನಲ್ಲಿ ಮುಳುಗಿ ನದಿಯಂತಾಗಿವೆ.
ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದ್ದು, ಸಂಧ್ಯಾವಂದನಾ ಮಂಟಪವೂ ನೀರಿನಲ್ಲಿ ಮುಳುಗಿದ್ದು ನೆರೆ ಏರುವ ಲಕ್ಷಣಗಳಿದ್ದು ಆತಂಕ ಎದುರಾಗಿದೆ.
ಮಂಗಳೂರು -ಶೃಂಗೇರಿ ಹೆದ್ದಾರಿ 169 ರ ಮುರುವಿನ ಕೊಂಬೆ ಸಮೀಪ ರಸ್ತೆ ಮೇಲೆ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತವಾಗಿದೆ.
ಚಿಕ್ಕಮಗಳೂರು-ಮಂಗಳೂರು ಬದಲಿ ಮಾರ್ಗವೂ ಬಂದ್
ಭಾರೀ ಪ್ರಮಾಣದ ಮಣ್ಣು ಕುಸಿತದ ಹಿನ್ನಲೆಯಲ್ಲಿ ಚಾರ್ಮಾಡಿ ರಸ್ತೆ ಬಂದ್ ಆದ ಮೇಲೆ ಕುದುರೆಮುಖ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿದ್ದವು.
ಕಳಸ-ಕುದುರೆಮುಖ ಮಾರ್ಗ ಜಲಾವೃತ ಆಗಿದ್ದು,ಕಳಸಾದ ನೇಲ್ಲಿಬೀಡು ಸೇತುವೆ ಮಳುಗಡೆಯಾಗಿದೆ. 150 ಅಡಿ ಸೇತುವೆ ಇತಿಹಾಸದಲ್ಲಿ ಮೊದಲ ಬಾರಿ ಮುಳುಗಡೆ ಆಗಿದ್ದು, ಸೇತುವೆ ಒಂದು ಕಿ.ಮೀ. ದೂರದವರೆಗೆ ವಾಹನಗಳು ಸಂಚಾರ ಸಾಧ್ಯವಾಗದೆ ಸಾಲುಗಟ್ಟಿ ನಿಂತಿವೆ.
ಶೃಂಗೇರಿಯ ಎಸ್.ಕೆ.ಬಾರ್ಡರ್ ರಸ್ತೆಯ ಮಧ್ಯದಲ್ಲಿಯೇ ಮರ ಹಾಗೂ ಮಣ್ಣು ಕುಸಿದು ಬಿದ್ದಿದ್ದು, ಭಾರೀ ವಾಹನ ಸಂಚಾರಕ್ಕೆ ಪೊಲೀಸರು ತಡೆ ಹಾಕಿದ್ದಾರೆ. ಲಘು ವಾಹನಗಳು ಮತ್ತು ಬೈಕ್ ಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿವೆ.
ಕಳೆದೊಂದು ವಾರದಿಂದ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹೆದ್ದಾರಿ ನಿರ್ವಹಣಾ ಕಾಮಗಾರಿಗೆ ಅಡ್ಡಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ,ಪುತ್ತೂರು ಬೆಳ್ತಂಗಡಿ ಭಾಗದಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಚಾರ್ಮಾಡಿ ಇನ್ನೂ ಕೆಲವೆಡೆ ಮಣ್ಣು ಕುಸಿಯುವ ಅಪಾಯ ಎದುರಾಗಿದೆ.
ಮಳೆಯಿಂದಾಗಿ ಪಲ್ಗುಣಿ ನದಿಯಲ್ಲಿ ನೀರು ಹೆಚ್ಚಾಗಿ ವೇಣೂರಿನ ಮೂಡಬಿದಿರೆ -ಗುರುವಾಯನಕೆರೆ ರಸ್ತೆಗೆ ನೀರು ಬಂದಿದ್ದು ರಸ್ತೆ ಬಂದ್ ಮಾಡಲಾಗಿದೆ.
Comments are closed.