ಕರ್ನಾಟಕ

ಭಾರಿ ಮಳೆಗೆ ಕೊಡಗು-ಮೈಸೂರು ಹೆದ್ದಾರಿ ಬಂದ್‌

Pinterest LinkedIn Tumblr


ಚಿಕ್ಕಮಗಳೂರು: ಕರಾವಳಿ ಸೇರಿದಂತೆ ಮಲೆನಾಡಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜಲಾಶಯಗಳು, ನದಿ ನೀರಿನ ಮಟ್ಟು ಏರಿಕೆಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಕೊಡಗು-ಮೈಸೂರು ಹೆದ್ದಾರಿ ಬಂದ್‌

ಭಾರಿ ಮಳೆಯಿಂದಾಗಿ ಕೊಡಗು – ಮೈಸೂರು ಹೆದ್ದಾರಿ (via ತಿತಿಮತಿ) ಸಂಪೂರ್ಣ ಬಂದ್ ಆಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿಯಲ್ಲಿ ಸೇತುವೆ ಕುಸಿದಿದೆ. ಒಂದು ವಾರದಿಂದಲೂ ಸುರಿಯುತ್ತಿರುವ ಮಹಾಮಳೆಗೆ ಸೇತುವೆ ಕುಸಿತ ಉಂಟಾಗಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ತುಂಬಿ ಹರಿದ ಭದ್ರಾ ನದಿ

ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿ ಭೂಮಿ, ಅಡಕೆ ತೋಟಕ್ಕೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕುದುರೆಮುಖ, ಕಳಸಾ ಕಡೆ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. 10 ವರ್ಷದ ನಂತರ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕರಾವಳಿಯಲ್ಲಿ ತುಂಬಿ ಹರಿದ ನದಿ

ಕರಾವಳಿಯಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಯಿಂದಾಗಿ ಫಲ್ಗುಣಿ ನದಿ ತುಂಬಿ ಹರಿಯುತ್ತಿದೆ. ಮಂಗಳೂರಿನ ಬಜ್ಪೆ ಸಮೀಪದ ಮರವೂರು ಸಮೀಪ ಅಣೆಕಟ್ಟು ಮುಳುಗಿದ್ದು, ಅಣೆಕಟ್ಟು ಮೇಲಿಂದ ನೀರು ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೂ ನೀರು ನುಗ್ಗುವ ಭೀತಿ ಎದುರಾಗಿದ್ದು, ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

Comments are closed.